Advertisement

ದುಷ್ಟ ಭಯಂಕರಿ “ಬನಶಂಕರಿ’

07:50 PM Dec 27, 2019 | Lakshmi GovindaRaj |

ಬನಶಂಕರಿ ದೇವಿಯ ಜಾತ್ರೆಯು ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧ. ಈ ಬಾರಿ ರಥೋತ್ಸವವು, ಪುಷ್ಯ ಮಾಸದ ಬನದ ಹುಣ್ಣಿಮೆಯಂದು (ಜ.10) ಏರ್ಪಡುತ್ತಿದೆ…

Advertisement

ಬನಶಂಕರಿಯ ಶಾಕಾಂಬರಿಯ ಶಕ್ತಿಪೀಠ ನಾಡಿನ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ ದೇವಿಯು ನವದುರ್ಗೆಯರಲ್ಲಿ 6ನೇ ಅವತಾರ. ಪಾರ್ವತಿಯು ಸಿಂಹದ ಮೇಲೆ ಕುಳಿತು, ಸದ್ಭಕ್ತರಿಗೆ ಅಭಯಹಸ್ತ ಚಾಚಿರುವ ಜಗನ್ಮಾತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಶಕ್ತಿಪೀಠಕ್ಕೆ ನಾನಾ ಕಥೆಗಳಿವೆ. ಈ ಹಿಂದೆ ಇಲ್ಲಿ ಜಲಕ್ಷಾಮ ಆಗಿದ್ದಾಗ, ಬನಶಂಕರಿ ದೇವಿಯು ಜಲಕೃಪೆ ನೀಡಿದಳು ಎನ್ನುವುದು ಒಂದು ಪ್ರತೀತಿ.

ತಿಲಕಾರಣ್ಯದಲ್ಲಿ ದುರ್ಗರಕ್ತ ಮತ್ತು ಧೂಮ್ರಾಕ್ಷರೆಂಬ ಕ್ರೂರ ರಾಕ್ಷಸರು ಸರ್ವರಿಗೂ ತೊಂದರೆ ಕೊಡುತ್ತಾ, ದೇವಲೋಕಕ್ಕೂ ದಾಳಿಯಿಟ್ಟರಂತೆ. ಆಗ ದೇವಿ ಆದಿಶಕ್ತಿಯ ಉಗ್ರ ರೂಪ ತಾಳಿ, ರಾಕ್ಷಸರನ್ನು ಸಂಹರಿಸುತ್ತಾಳೆ. ನಂತರ ದೇವತೆಗಳ ಭಕ್ತಿಗೆ ಒಲಿದು, ಶಾಂತ ಸ್ವರೂಪಿಯಾಗಿ ಬನಶಂಕರಿಯಲ್ಲಿ ನೆಲೆ ನಿಂತಳು ಎನ್ನುವ ನಂಬಿಕೆಯೂ ಇದೆ.

ಚಾಲುಕ್ಯ ಧಾಮ: ಕೋಟೆಯನ್ನು ನೆನಪಿಸುವ ಪ್ರವೇಶ ದ್ವಾರ, 360 ಅಡಿಗಳ ಚೌಕಾಕಾರದ ಕಲ್ಯಾಣಿ… ಹಾಗೇ ಮುಂದಕ್ಕೆ ಹೋದರೆ, ಸುಂದರ ಬನಶಂಕರಿ ದೇವಾಲಯ. 7ನೇ ಶತಮಾನದ ಚಾಲುಕ್ಯರ ಅರಸನಾದ 1ನೇ ಜಗದೇಕಮಲ್ಲನ ಕಾಲದಲ್ಲಿ ಈ ದೇಗುಲವನ್ನು ಕಟ್ಟಲಾಯಿತು. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಬಗ್ಗೆ ಶಾಸನಗಳು ಹೇಳುತ್ತವೆ. 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು, ದೇಗುಲದ ಪುನರ್‌ ನಿರ್ಮಾಣ ಮಾಡಿರುವ ಬಗ್ಗೆ ಉಲ್ಲೇಖಗಳಿವೆ. ಸ್ತಂಭಗಳಲ್ಲಿ ಚಿತ್ರಿತವಾದ ಚಾಲುಕ್ಯ ವಾಸ್ತುಶಿಲ್ಪದ ಕುಸುರಿ ಕಲೆಯ ಅಂದಕ್ಕೆ ದೃಷ್ಟಿಯ ಬೊಟ್ಟು ಇಡಲೇಬೇಕು. ಅಷ್ಟು ಸೊಗಸಾಗಿದೆ.

ಆಳೆತ್ತರದ ದೇವಿ: ಗರ್ಭಗುಡಿಯಲ್ಲಿ ಸಿಂಹದ ಮೇಲೆ ಕುಳಿತ ಪಾರ್ವತಿ ದೇವಿಯ ಮೂರ್ತಿ, 5 ಅಡಿ ಎತ್ತರವಿದೆ. ಮೂರ್ತಿಯು ಕಪ್ಪುಶಿಲೆಯಿಂದ ಕೂಡಿದೆ. ದೇವಿಗೆ ಅಷ್ಟ ಭುಜಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಹಾಗೂ ಲಿಪ್ತಿ ಅಲ್ಲದೆ, ಎಡಗೈಯಲ್ಲಿ ಡಮರು, ಢಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ಈ ದೇವಿ, ತ್ರಿನೇತ್ರೆ; ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಸ್ವರೂಪಿಣಿ.

Advertisement

ಬನಶಂಕರಿ ದೇವಿಯ ಜಾತ್ರೆಯು ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧ. ಈ ಬಾರಿ ರಥೋತ್ಸವವು, ಪುಷ್ಯ ಮಾಸದ ಬನದ ಹುಣ್ಣಿಮೆಯಂದು (ಜ.10) ಏರ್ಪಡುತ್ತಿದೆ. 108 ವಿವಿಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ನೈವೇದ್ಯವಾಗಿಡುವುದು ಈ ಸಂದರ್ಭದ ವಿಶೇಷ.

ದರುಶನಕೆ ದಾರಿ…: ಬನಶಂಕರಿ ದೇಗುಲವು, ಬಾಗಲಕೋಟೆಯಿಂದ 38 ಕಿ.ಮೀ. ದೂರದಲ್ಲಿದೆ. ಬಾದಾಮಿಯಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ರೈಲು, ಬಸ್ಸು ಸಂಪರ್ಕ ಬೆಸೆಯುತ್ತವೆ.

ತೆಪ್ಪದೊಳು ಕಂದಮ್ಮ…: ಬನಶಂಕರಿಯಲ್ಲಿ ಜಾತ್ರೆ ವೇಳೆ ನಡೆಯುವ ತೆಪ್ಪೋತ್ಸವ, ಒಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗುತ್ತದೆ. ನವಜಾತ ಶಿಶುಗಳಿಗೆ ದೇವಿಯ ಆಶೀರ್ವಾದ ಸಿಗಲೆಂದು ಪಾಲಕರು, ಬಾಳೆದಿಂಡಿನಲ್ಲಿ ತಯಾರಿಸಲಾದ ತೆಪ್ಪದಲ್ಲಿ ಮಗುವನ್ನು ಮಲಗಿಸಿ, ಕಲ್ಯಾಣಿಗೆ ಪ್ರದಕ್ಷಿಣೆ ಹಾಕುತ್ತಾರೆ.

* ಸುರೇಶ ಗುದಗನವರ

Advertisement

Udayavani is now on Telegram. Click here to join our channel and stay updated with the latest news.

Next