ಎಲ್ಲೆಡೆ ಖುಷಿ ತುಂಬುವ ನೀನು ಒಮ್ಮೊಮ್ಮೆ ಮೈಮರೆತು ದೀರ್ಘಾಲೋಚನೆಯಲ್ಲಿ ಮುಳುಗುವುದೇಕೆ? ಒಮ್ಮೊಮ್ಮೆ ತೀರಾ ಡಲ… ಆಗಿ ಕುಳಿತುಬಿಡುವುದೇಕೆ? ಕಾರಣವಿಲ್ಲದೆ ಒಮ್ಮೊಮ್ಮೆ ಕೋಪಿಸಿಕೊಳ್ಳುವುದೇಕೆ? ಇಷ್ಟು ಆತ್ಮೀಯತೆ ಇದ್ದರೂ ನಿನ್ನೊಳಗಿನ ಬೇಸರ ದುಃಖಗಳನ್ನು ನೀನು ಬಚ್ಚಿಡುತ್ತಿರುವುದೇಕೆ?
ಓಯ್ ತಿಂಡಿಪೋತಿ,
ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ಮುಖದ ಮೇಲೆ ಮೂಡುವ ಸಣ್ಣ ನಗು, ನಿನ್ನತ್ತಲೇ ಎಳೆಯುವ ಹುಚ್ಚು ಮನಸ್ಸು, ನಿನಗೆ ಹೇಳಬೇಕಾಗಿರೋದನ್ನು ಹೇಳಲು ಸಹಕರಿಸದ ಹೇಡಿ ಮಾತುಗಳು, ಇನ್ನೂ ತಡಮಾಡಬಾರದೆಂದು ಎಚ್ಚರಿಸುತ್ತಿರುವ ಬುದ್ಧಿ… ಇವೆಲ್ಲವೂ ಸೇರಿ ನಿನಗೆ ಪತ್ರ ಬರೆಯುವುದೇ ಸರಿಯಾದ ಮಾರ್ಗ ಅಂತ ಅನ್ನಿಸಿಬಿಲ್ಲೆ…
ನಿನ್ನನ್ನು ಕ್ಲಾಸ್‌ರೂಮಿನಲ್ಲಿ ನೋಡಿದ್ದಕ್ಕಿಂತ ಹೆಚ್ಚಾಗಿ ಕ್ಯಾಂಪಸ್ಸಿನ ಕ್ಯಾಂಟೀನಿನಲ್ಲಿ, ಬೇಕರಿಯಲ್ಲಿ, ಪಾನಿಪುರಿ ಗಾಡಿ ಹತ್ತಿರ, ಪಿಜ್ಜಾ ಹಟ್‌ನಲ್ಲಿ, ಚಾಟ್‌ಸ್ಟ್ರೀಟ್‌ನಲ್ಲಿ ನೋಡಿದ್ದೇ ಹೆಚ್ಚು. ಇದೇನು ಈ ಹುಡುಗಿ ಇಷ್ಟೆಲ್ಲಾ ತಿಂತಾಳಲ್ಲ ಅಂತ ತುಂಬಾ ಆಶ್ಚರ್ಯ ಆಗ್ತಾ ಇತ್ತು. ಒಂದು ದಿನ ಕಾಲೇಜು ಕ್ಯಾಂಟೀನ್‌ನಲ್ಲಿ ನೀನು ಆರ್ಡರ್ ಮಾಡಿದ್ದ ಬೇಬಿ ಕಾರ್ನ್ ಮಂಚೂರಿಯನ್ನು, ನಾನು ಆರ್ಡರ್ ಮಾಡಿದ ಗೋಬಿ ಮಂಚೂರಿ ಅಂತಾ ತಿಳ್ಕೊಂಡು ಕೌಂಟರ್‌ನಿಂದ ತೆಗೆದುಕೊಂಡು ಹೊರಟಾಗ ಮೊದಲ ಬಾರಿಗೆ ನೀನು ನನ್ನನ್ನು ಮಾತನಾಡಿಸಿದ್ದೆ. ಸಾರಿ, ಅದು ಮಾತಲ್ಲ. ನೀನು ಒಮ್ಮೆಲೇ ಬಯ್ಯಲಾರಂಭಿಸಿದೆ : “ನಿಂಗೇನಾದ್ರು ಕಾಮನ್ ಸೆ… ಇದ್ಯಾ! ಇನ್ನೊಬ್ರು ಆರ್ಡರ್ ಮಾಡಿದ್ದನ್ನ ಎತ್ಕೊಂಡ್ ಹೋಗ್ತಾ ಇದ್ಯಲ್ಲಾ’ ಎಂದಾಗ ನನೂ ಕೋಪ ನೆತ್ತಿಗೇರಿತ್ತು. ಆದರೂ ಏನಾಗ್ತಾ ಇದೆ ಅಂತ ಯೋಚಿಸಿ ಮಾತಾಡೋಷ್ಟರಲ್ಲಿ ನೀನು ಒಂದೇ ಬಾರಿಗೆ ನನ್ನ ಕೈಲಿದ್ದ ಪ್ಲೇಟ್ ಕಿತ್ಕೊಂಡು ಹೋಗಿದ್ದೆ.
ಇದನ್ನು ನೋಡಿದ್ದ ಕ್ಯಾಂಟೀನ್‌ನ ಹುಡುಗ “ಕನ್ಫ್ಯೂಸ್ ಆಯ್ತಾ? ಅದು ಬೇಬಿ ಕಾರ್ನ್, ನೀವ್ ಆರ್ಡರ್ ಮಾಡಿದ್ದು ಗೋಬಿ. ಅದು ಇಲ್ಲಿದೆ ತಗೊಳ್ಳಿ’ ಎಂದಾಗ ನಿನ್ನ ಕೋಪಕ್ಕೆ ಕಾರಣವೇನೆಂದು ಅರ್ಥ ಆಗಿತ್ತು. ಆದರೂ, ಯಾವುದೋ ಒಂದು ಮಂಚೂರಿ. ಅದಕ್ಯಾಕೆ ಹಿಂಗಾಡ್ತಾಳೆ ಈ ಡುಮ್ಮಿ ಅಂತ ಬೈಕೊಂಡು ಸುಮ್ಮನಾದೆ.
ಆವತ್ತಿಂದ ಶುರುವಾಯ್ತು ನೋಡು ನಿನ್ನ ಕಾಟ. ಎಲ್ಲಿ ನಾನು ನಿನ್ನ ಕಣ್ಣಿಗೆ ಬಿದ್ದರೂ “ಮಂಚೂರಿ ಕಳ್ಳ’ ಅಂತ ಕರೀತಾ ಇದ್ದೆ. ನಾನೇನು ಕಡಿಮೆ? ಡುಮ್ಮಿ, ತಿಂಡಿಪೋತಿ ಅಂತ ನಿನ್ನನ್ನು ಅಣಕಿಸುತ್ತಿದ್ದೆ. ನಿನ್ನ ಮೇಲೆ ಇದ್ದ ಕೋಪ ಕ್ರಮೇಣ ಕರಗಿ, ಸ್ನೇಹವಾಗಿ, ಪ್ರೀತಿಯಾಗಿ ಬದಲಾಗಿದ್ದು ಹೇಗೆ ಅಂತಾನೇ ತಿಳೀಲಿಲ್ಲ. ಯಾರ ಬಗ್ಗೆಯೂ ಕೊಂಕು ಮಾತಾಡದ ನಿನ್ನ ಒಳ್ಳೆಯತನ, ಜೊತೆಯಲ್ಲಿರುವ ಎಲ್ಲರನ್ನೂ ಸಮಾನವಾಗಿ ಕಾಣುವ ಸ್ವಭಾವ, ಯಾರನ್ನೂ ನೋಯಿಸದ ನಿನ್ನ ತಮಾಷೆ, ಒಳ್ಳೆಯದನ್ನು ಮುಕ್ತವಾಗಿ ಹೊಗಳುವ ಸಹೃದಯತೆ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಎಲ್ಲವನ್ನೂ ಹತ್ತಿರದಿಂದ ಕಂಡಾಗ, ನನಗೆ ನಿನ್ನ ಬಗ್ಗೆ ಮೊದಲಿದ್ದ “ಈ ಡುಮ್ಮಿಗೆ ಬರೀ ತಿನ್ನೋದೇ ಕೆಲಸ’ ಅನ್ನೋ ಅಭಿಪ್ರಾಯ ಬದಲಾಯಿತು.
ನೀನಿದ್ದಲ್ಲಿ ಬಾಯಿಗೆ ಪುರುಸೊತ್ತಿಲ್ಲದೆ ತಿನ್ನುವುದರ ಜೊತೆ ಹರಟೆ, ನಗು, ತಮಾಷೆ ತುಂಬಿರುತ್ತದೆ. ಎಲ್ಲೆಡೆ ಖುಷಿ ತುಂಬುವ ನೀನು ಒಮ್ಮೊಮ್ಮೆ ಮೈಮರೆತು ದೀರ್ಘಾಲೋಚನೆಯಲ್ಲಿ ಮುಳುಗುವುದೇಕೆ? ಒಮ್ಮೊಮ್ಮೆ ತೀರಾ ಡಲ್ ಆಗಿ ಕುಳಿತುಬಿಡುವುದೇಕೆ? ಕಾರಣವಿಲ್ಲದೆ ಒಮ್ಮೊಮ್ಮೆ ಕೋಪಿಸಿಕೊಳ್ಳುವುದೇಕೆ? ಇಷ್ಟು ಆತ್ಮೀಯತೆ ಇದ್ದರೂ ನಿನ್ನೊಳಗಿನ ಬೇಸರ ದುಃಖಗಳನ್ನು ಬಚ್ಚಿಡುತ್ತಿರುವುದೇಕೆ? ಒಟ್ಟಿನಲ್ಲಿ ನೀನು ನನಗೊಂದು ವಿಸ್ಮಯ. ನಿನ್ನ ಬಗ್ಗೆ ಸಂಪೂರ್ಣವಾಗಿ ಅರಿತಿಲ್ಲವೆನಿಸಿದ್ದರೂ, ನಿನ್ನ ನಗುಮೊಗದ ಹಿಂದಿನ ವಿಷಾದದ ಛಾಯೆಯನ್ನು ಗುರುತಿಸಬಲ್ಲೆ. ನಿನ್ನ ನೋವುಗಳಿಗೆ ಕಿವಿಯಾಗಿ, ಸಂತೈಸುವ ಮನಸ್ಸಾಗಿ, ಎಂದೆಂದೂ ಕೈ ಹಿಡಿದು ನಡೆವ ಗೆಳೆಯನಾಗುವಾಸೆ ನನಗೆ. ನನ್ನ ಈ ಮಾತುಗಳಿಗೆ ನಿನ್ನ ಪ್ರತಿಕ್ರಿಯೆ ಹೇಗಿರುತ್ತದೋ ಗೊತ್ತಿಲ್ಲ. ಪ್ರೀತಿಯೆಂಬ ಸೆಳೆತ ನನ್ನನ್ನು ದಿನ ದಿನಕ್ಕೂ ಗಾಢವಾಗಿ ಆವರಿಸುತ್ತಿದೆ. ಹೇಳು ನನ್ನ ಮುದ್ದಿನ ತಿಂಡಿಪೋತಿ, ನಿನ್ನ ಮನಸ್ಸನ್ನು ಈ ಮಂಚೂರಿ ಕಳ್ಳ ಕದ್ದಿದ್ದಾನಾ???
ನಿನ್ನವನಾಗೋಕೆ ಬಯಸುತ್ತಿರೋ ಮಂಚೂರಿ ಕಳ್ಳ
ಪುನೀತ್ ಕುಮಾರ್. ಎಲ್. ಎಮ್ .ರಾಮನಗರ