ಪಣಜಿ: ಗೋವಾ(GOA) ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆ(Heavy Rain)ಗೆ ಹಲವೆಡೆ ರಸ್ತೆಗಳು ಮುಳುಗಿದೆ, ಕೆಲವು ಕಡೆ ಭೂಕುಸಿತವುಂಟಾಗಿರುವ ಬಗ್ಗೆಯೂ ವರದಿಯಾಗಿದೆ.
ತಗ್ಗುಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗೋವಾ(GOA) ರಾಜ್ಯದಲ್ಲಿ ಭಾನುವಾರ(Sunday) ಮತ್ತು ಸೋಮವಾರ (Monday) ಹವಾಮಾನ ಇಲಾಖೆ ರೆಡ್ ಅಲರ್ಟ್(red alert) ಘೋಷಿಸಿದ್ದು ಜನರು ಜಾಗೃತರಾಗಿರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗೋವಾದಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದೆ. ಆದರೆ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಭಾನುವಾರ ರಜಾದಿನವಾದರೂ ಕೂಡ ಜನರು ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಮಳೆಯಾಗುತ್ತಿದೆ.
ರಸ್ತೆಗಳಲ್ಲಿ ಮೊಣಕಾಲು ನೀರು ತುಂಬಿದೆ. ನದಿಗಳ ಮಟ್ಟ ಏರಿಕೆಯಾಗಿದೆ. ಹಲವೆಡೆ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ರಾಜ್ಯದಲ್ಲಿ ಧಾರಾಕಾರ ಮಳೆಗೆ ತಿಳಾರಿ ಅಣೆಕಟ್ಟು ಈಗಾಗಲೇ ಭರ್ತಿಯಾಗಿದೆ. ಅಂಜುಣೆ ಅಣೆಕಟ್ಟು ಭರ್ತಿಯಾಗುತ್ತಿರುವುದರಿಂದ ಭಾನುವಾರ ರಾತ್ರಿ ಎಲ್ಲ ಗೇಟ್‍ಗಳನ್ನು ತೆರೆಯುವ ಸಾಧ್ಯತೆಯಿದೆ. ಇದರಿಂದಾಗಿ ಅಣೆಕಟ್ಟು ಪರಿಸರದ ಹಳ್ಳಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಸೋಮವಾರ ಕೂಡ ರಾಜ್ಯದಲ್ಲಿ ರೆಡ್ ಅಲರ್ಟ್(red alert) ಘೋಷಿಸಿದ್ದು, ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗೋವಾ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.