Advertisement

ಕಾಂಗ್ರೆಸ್‌ ಸೋಲಿಸುವುದೇ ಗುರಿ: ಸೋಮಶೇಖರ್‌

12:13 PM Sep 14, 2017 | |

ದಾವಣಗೆರೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡದೇ ಹೋದಲ್ಲಿ ಮುಂದಿನ ವಿಧಾನ ಸಭಾ
ಚುನಾವಣೆಯಲ್ಲಿ ಈಗಿನ ಆಡಳಿತ ಪಕ್ಷ ಕಾಂಗ್ರೆಸ್‌ ಸೋಲಿಸುವುದೇ ನಮ್ಮ ಗುರಿ ಆಗಲಿದೆ ಎಂದು ದಲಿತ ಸಂಘರ್ಷ ಸಮಿತಿ
(ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಸೋಮಶೇಖರ್‌ ಎಚ್ಚರಿಸಿದ್ದಾರೆ.

Advertisement

ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಒಳ, ಬಡ್ತಿ ಮೀಸಲಾತಿ ಬಾಧ್ಯತೆ ಮತ್ತು ಸಾಧ್ಯತೆಗಳು, ಪರಿಶಿಷ್ಟ ಜಾತಿ-ವರ್ಗ ಸುಳ್ಳು ಜಾತಿ ಪತ್ರ ಸಮಸ್ಯೆ ಮತ್ತು ಪರಿಹಾರ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರವಾಗಿ ಮಾದಿಗ ಮತ್ತು ಹೊಲೆಯ ಸಹೋದರರು ಹೊಡೆದಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒಳಗೊಂತೆ ಸರ್ಕಾರಿ ಸೌಲಭ್ಯ ಪಡೆಯಬಹುದು ಎಂದು ಸಂವಿಧಾನವೇ ಹೇಳಿದೆ. ಅದರಂತೆ ಸೌಲಭ್ಯಕ್ಕಾಗಿ ಒಳ ಮೀಸಲಾತಿ ವರ್ಗೀಕರಿಸಲು ಒತ್ತಾಯಿಸಿ ನಿರಂತರವಾಗಿ ನಡೆಸಿದ ಹೋರಾಟದ ಪರಿಣಾಮ ರಚಿತಗೊಂಡ ನ್ಯಾ. ಎ.ಜೆ.ಸದಾಶಿವ ಆಯೋಗ ತನ್ನ ವರದಿ ಸಲ್ಲಿಸಿ, ವರ್ಷಗಳೇ ಆಗಿವೆ. ಎಲ್ಲಾ ಪಕ್ಷದ ಸರ್ಕಾರಗಳು ಒಳ ಮೀಸಲಾತಿ ಸಂಬಂಧ ನ್ಯಾ. ಎ.ಜೆ.ಸದಾಶಿವ ಆಯೋಗದ ಜಾರಿಗೊಳಿಸುವ ಮೂಲಕ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾ. ಸದಾಶಿವ ಆಯೋಗದ ವರದಿ ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಮಾದಿಗ ಸಮಾಜಕ್ಕೆ
ರಾಜಕೀಯದ ಲಾಭ ದೊರೆಯುವುದ ತಪ್ಪಿಸಲಾಗುತ್ತಿದೆ. ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸದಾಶಿವ ಆಯೋಗದ ವರದಿ ಜಾರಿ ಆಗುವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಬಡ್ತಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿರುವ ತಪ್ಪಿನ ಪರಿಣಾಮವಾಗಿಯೇ ಸರ್ವೋತ್ಛ ನ್ಯಾಯಾಲಯ ನೀಡಿರುವ ಆದೇಶದಿಂದಾಗಿ
30 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ, ಪಂಗಡಗಳ ನೌಕರರು ಹಿಂಬಡ್ತಿ ಹೊಂದುವುದು ಅವರ ಆತ್ಮಗೌರವಕ್ಕೆ ಧಕ್ಕೆ ತರುವ ವಿಚಾರ. ತಾನು ಮಾಡಿರುವ ತಪ್ಪನ್ನ ರಾಜ್ಯ ಸರ್ಕಾರವೇ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ಹಿಂಬಡ್ತಿಗೆ ಅವಕಾಶ ಮಾಡಿಕೊಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಅನುಸರಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅತ್ಯಂತ ಖಂಡನೀಯ. ಏನನ್ನೂಮಾಡಲಿಕ್ಕಾಗದ ರಾಜ್ಯ ಸರ್ಕಾರ ಕೊನೆಗೆ ಪ್ರಗತಿಪರ ಚಿಂತಕರಿಗೆ ಸೂಕ್ತ ರಕ್ಷಣೆ
ಕೊಡುವಲ್ಲೂ ವಿಫಲವಾಗಿದೆ. ಹಾಗಾಗಿ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿ, ಈಗಲೇ ಚುನಾವಣೆಗೆ ಹೋಗುವುದು ಸೂಕ್ತ ಎಂದರು.

Advertisement

ಕೇಂದ್ರ ಸರ್ಕಾರದ ನೋಟು ಅಮಾನ್ಯ, ಜಿಎಸ್‌ಟಿ ಜಾರಿಯಿಂದ ಜನ ಸಾಮಾನ್ಯರು ಔಷಧಿ ಕೊಂಡುಕೊಳ್ಳುವ ಸ್ಥಿತಿಯಲ್ಲೂ ಇಲ್ಲದಂತಾಗಿದೆ. ಆಹಾರದ ವಿಚಾರವಾಗಿಯೇ ಕೋಮುಗಲಭೆ, ಅಶಾಂತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಲಿತ
ವಿರೋಧಿ ನೀತಿ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯತಿ ಸದಸ್ಯ ಆಲೂರು ನಿಂಗರಾಜ್‌ ಮಾತನಾಡಿ, ಹಣದ ಬಲದಿಂದ ಸರ್ಕಾರಗಳು ದಲಿತ ಹೋರಾಟವನ್ನೇ ಹೈಜಾಕ್‌ ಮಾಡುವ ಪ್ರಯತ್ನ ನಡೆಸುತ್ತಿವೆ. ಹಿಂದೆ ದಲಿತರು ಗುಡುಗಿದರೆ ವಿಧಾನಸೌಧ ನಡುಗುವ ವಾತಾವರಣ ಇತ್ತು. ಈಗ ಮತಗಳಿಕೆಗೆ ಮುಖಂಡರನ್ನು ಕೊಳ್ಳುವ
ಪ್ರಯತ್ನ ನಡೆಯುತ್ತಿದೆ. ಎಲ್ಲ ದಲಿತ ಸಂಘಟನೆಗಳು ಒಂದಾಗಿ ಹೋರಾಟ, ಸಂಘಟನೆಯ ಪುನಶ್ಚೇತನ ಮಾಡಬೇಕಿದೆ ಎಂದರು.

ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ 20 ಸಾವಿರ ಕೋಟಿ ಮೀಸಲಿರಿಸಿರುವುದಾಗಿ ಹೇಳಿಕೊಳ್ಳುವ ಸಮಾಜ ಕಲ್ಯಾಣ ಸಚಿವರು ಯಾರಿಗೆ, ಯಾವ ಜಿಲ್ಲೆಗೆ ಎಷ್ಟೆಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ಡಾ|
ಎಚ್‌. ವಿಶ್ವನಾಥ್‌, ಎಂ. ದೇವದಾಸ್‌, ಎಚ್‌.ಎನ್‌. ಸನಂದಕುಮಾರ್‌, ಭಾಗ್ಯಮ್ಮ ನಾರಾಯಣಸ್ವಾಮಿ, ಕವಾಲಿ ವೆಂಕಟರಮಣಪ್ಪ, ಡಾ| ಎಂ. ಕೃಷ್ಣಮೂರ್ತಿ, ಶ್ರೀಧರ ಕಲವೀರ, ನಾಗಲಿಂಗಪ್ಪ, ಸರೋಜಿನಿ ಮಹಿಷಿ, ವಿಜಯಮ್ಮ ಇತರರು ಇದ್ದರು.

ಐರಣಿ ಚಂದ್ರು ಜಾಗೃತ ಗೀತೆ ಹಾಡಿದರು. ಹಳ್ಳೂರು ಈರಣ್ಣ ಸ್ವಾಗತಿಸಿದರು. ಅಂದಾನಿ ಸೋಮನಹಳ್ಳಿ ನಿರೂಪಿಸಿದರು. ವಿವಿಧ ವಿಚಾರ ಮಂಡನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next