ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಗೋವಾ ಕನ್ನಡಿಗರ ಬಹು ವರ್ಷಗಳ ಕನಸಾಗಿದೆ. ಕಳೆದ ವರ್ಷ ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ನೀಡುವುದಾಗಿ ಘೋಷಿಸಿತ್ತು. ಇದೀಗ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುವ ಕಾಲ ಸಮೀಪಿಸಿದಂತಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಸರ್ಕಾರಕ್ಕೆ ಈ ಕುರಿತ ವರದಿ ಸಲ್ಲಿಸಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ರವರು ಗೋವಾಕ್ಕೆ ಆಗಮಿಸಿ ಗೋವಾದ ವಿವಿಧೆಡೆ ಜಾಗ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಕಸಾಪ ಗೋವಾ ರಾಜ್ಯ ಘಟಕದ ಪರಿಶಿಷ್ಠ ಜಾತಿ ಪ್ರತಿನಿಧಿ ತವರಪ್ಪ ಲಮಾಣಿ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಉಪಾಧ್ಯಕ್ಷ ಪರಶುರಾಮ ಚೌವ್ಹಾಣ, ಖಜಾಂಚಿ ಮಾರುತಿ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.
ಗೋವಾದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದು, ಗೋವಾದಲ್ಲಿ ಸುಮಾರು 20 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳಿವೆ. ಇಷ್ಟೇ ಅಲ್ಲದೆಯೇ ಗೋವಾ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಗೋವಾ ರಾಜ್ಯ, ಉತ್ತರಗೋವಾ, ದಕ್ಷಿಣ ಗೋವಾ, ಹಾಗೂ ವಿವಿಧ ತಾಲೂಕಾ ಘಟಕಗಳು ಸ್ಥಾಪನೆಯಾಗಿದೆ. ಆದರೆ ಗೋವಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರು ಇದ್ದರೂ ಕೂಡ ಸತತವಾಗಿ ಕನ್ನಡಿಗರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೂಡ ಕನ್ನಡಿಗರಿಗೆ ಇದುವರೆಗೂ ಈ ಕನ್ನಡಿಗರಿಗೆ ಏಕೈಕ ವೇದಿಕೆ ಕನ್ನಡ ಭವನ ನಿರ್ಮಾಣವಾಗದಿರುವುದು ಖೇದಕರ ಸಂಗತಿಯಾಗಿದೆ.
ಗೋವಾದಲ್ಲಿ ಜಾಗ ಖರೀದಿಗೆ 7 ರಿಂದ 8 ಕೋಟಿ ರೂ ಅಗತ್ಯವಿದೆ-ಪ್ರಕಾಶ ಮತ್ತೀಹಳ್ಳಿ:
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಗೋವಾದಲ್ಲಿ ಐದಾರು ಸ್ಥಳಗಳಲ್ಲಿ ಜಾಗ ವೀಕ್ಷಿಸಿದ್ದೇನೆ. ಗೋವಾದಲ್ಲಿ ಕನ್ನಡಿಗರು ಹೆಚ್ಚಾಗಿ ವಾಸ್ತವ್ಯ ಹೊಂದಿರುವ ಸ್ಥಳದಲ್ಲಿಯೇ ಕನ್ನಡ ಭವನ ನಿರ್ಮಾಣವಾದರೆ ಹೆಚ್ಚಿನ ಅನುಕೂಲವಾಗಲಿದೆ ಮತ್ತು ಹೆಚ್ಚು ಉಪಯೋಗವೂ ಆಗಲಿದೆ. ಆದರೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಸುಮಾರು 7 ರಿಂದ 8 ಕೋಟಿ ರೂ ಅಗತ್ಯವಿದೆ. ಇದರಿಂದಾಗಿ ಈಗಾಗಲೇ ವೀಕ್ಷಿಸಿರುವ ಜಾಗಗಳ ವಿವರಗಳನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದರೆ ಗೋವಾದಲ್ಲಿ ಕನ್ನಡ ಭವನಕ್ಕೆ ಜಾಗ ಖರೀದಿಸಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ರವರು ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿರುವ ಸ್ಥಳದಲ್ಲಿಯೇ ಕನ್ನಡ ಭವನ ನಿರ್ಮಾಣವಾದರೆ ಸೂಕ್ತ-ಡಾ.ಸಿದ್ಧಣ್ಣ ಮೇಟಿ
ಗೋವಾ ರಾಜ್ಯದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾ ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಿಗರು ನೆಲೆಸಿದ್ದಾರೆ. ಗೋವಾದ ಯಾವುದೇ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದರೂ ಅಡ್ಡಿಯಿಲ್ಲ. ಆದರೆ ಕನ್ನಡಿಗರು ಹೆಚ್ಚಾಗಿ ವಾಸಿಸುತ್ತಿರುವ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದರೆ ಸೂಕ್ತ. ಕನ್ನಡ ಭವನವು ಗೋವಾದಲ್ಲಿ ಕನ್ನಡಿಗರ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕಾರ್ಯಕ್ರಮ ಆಯೋಜನೆಗೆ ಸದ್ಬಳಕೆಯಾಗುವಂತಿರಬೇಕು. ಕನ್ನಡ ಭವನ ನಿರ್ಮಾಣಕ್ಕೆ ಮೊದಲು ಗೋವಾದಲ್ಲಿ ಜಾಗ ಖರೀದಿಸಬೇಕಿದೆ. ಇದರಿಂದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ರವರು ಗೋವಾಕ್ಕೆ ಆಗಮಿಸಿ ವಿವಿಧೆಡೆ ಜಾಗ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಸ್ತಾವನೆಯನ್ನು ಅವರು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದರು.