ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸನ್‍ಬರ್ನ್ ಸಂಗೀತ ಮಹೋತ್ಸವ(ಇಡಿಎಂ) ಆಯೋಜನೆಗೆ ಪರವಾನಗಿ ನೀಡದಿದ್ದರೂ ಕೂಡ ಇದೀಗ ಪರಸೆಪ್ಟ ಲೈವ್ ಕಂಪನಿಯು ಇಡಿಎಂ ಆಯೋಜಿಸುವುದಾಗಿ ಘೋಷಿಸಿದ್ದು, ಆದರೆ ನಿಗದಿತ ಸಂಖ್ಯೆಯಲ್ಲಿ ಮಾತ್ರ ಪ್ರೇಕ್ಷಕರಿಗೆ ಪ್ರವೇಶಾವಕಾಶ ನೀಡುವುದಾಗಿ ಹೇಳಿದೆ.
ಡಿಸೆಂಬರ್ 27 ರಿಂದ 29 ಈ ಸಂದರ್ಭದಲ್ಲಿ ಗೋವಾದ ವಾಗಾತೋರ್ ಬೀಚ್ ಬಳಿ ಈ ಸನ್‍ಬರ್ನ್ ಮಹೋತ್ಸವ ಆಯೋಜಿಸಲಾಗಿತ್ತು. ಈ ಕುರಿತ ಪ್ರಸ್ತಾವವನ್ನೂ ಸದ್ರಿ ಕಂಪನಿಯು ಸರ್ಕಾರಕ್ಕೆ ಕಳುಹಿಸಿತ್ತು. ಆದರೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಈ ಪ್ರಸ್ತಾವನ್ನು ಪರವಾನಗಿ ನೀಡಲು ನಿರಾಕರಿಸಿದ್ದರು.
ಆದರೆ ಈ ಮೊದಲಿನಂತೆ ಅಲ್ಲದೆಯೇ ಕಡಿಮೆ ಪ್ರಮಾಣದಲ್ಲಿ ನಿಗದಿತ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಪ್ರವೇಶಾವಕಾಶ ನೀಡಿ ಸನ್‍ಬರ್ನ್ ಮಹೋತ್ಸವ ಆಯೋಜಿಸುವುದಾಗಿ ಕಂಪನಿ ಹೇಳಿದೆ. ಕರೋನಾ ಮಹಾಮಾರಿ ಸದ್ಯ ಸಂಪೂರ್ಣ ನಿಯಂತ್ರಣದಲ್ಲಿದೆ. ಪ್ರವಾಸಿಗರು ಕೂಡ ಭಾರಿ ಪ್ರಮಾಣದಲ್ಲಿ ಗೋವಾಕ್ಕೆ ಆಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಗಾತೋರ್‍ನಲ್ಲಿನ ಹಿಲ್‍ಟೋಪ್ ಹೋಟೆಲ್‍ನೊಂದಿಗೆ ಕೈಜೋಡಿಸಿ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಿ ಸನ್‍ಬರ್ನ್ ಮಹೋತ್ಸವ ಆಯೋಜಿಸುವುದಾಗಿ ಕಂಪನಿ ಹೇಳಿದೆ. ಈ ಕುರಿತು ಕಂಪನಿಯು ಸನ್‍ಬರ್ನ್ ಫೆಸ್ಟಿವಲ್ ಇನ್‍ಸ್ಟಾಗ್ರಾಮನಲ್ಲಿ ಹೇಳಿದೆ.
ಪ್ರತಿ ವರ್ಷ ಡಿಸೆಂಬರ್‍ನಲ್ಲಿ ಆಯೋಜಿಸಲಾಗುವ ಸನ್‍ಬರ್ನ ಸಂಗೀತ ಮಹೋತ್ಸವದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಿದ್ದರು. ಆದರೆ ಕಳೆದ ವರ್ಷ ಕರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಸನ್‍ಬರ್ನ್ ಸಂಗೀತ ಮಹೋತ್ಸವ ಆಯೋಜಿಸಲು ಸಾಧ್ಯವಾಗಿರಲಿಲ್ಲ.