ಪಣಜಿ: ರಾಜ್ಯದಲ್ಲಿ 10ನೇ ತರಗತಿವರೆಗಿನ ಒಟ್ಟು 1,727 ಶಾಲೆಗಳಿದ್ದು, 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೀಘ್ರವೇ ಮಧ್ಯಾಹ್ನದ ಊಟ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಗೋವಾ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಪ್ರತಿಪಕ್ಷದ ಶಾಸಕರ ಪ್ರಶ್ನೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ 853, ಅನುದಾನಿತ ಶಾಲೆಗಳ ಸಂಖ್ಯೆ 704 ಮತ್ತು 170 ಅನುದಾನರಹಿತ ಶಾಲೆಗಳಿವೆ. ಶೇ 90 ರಷ್ಟು ಮಕ್ಕಳು ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಶಾಲೆಗಳಿಗೆ ಸರಕಾರ ಶೇ.72ರಷ್ಟು ಅನುದಾನ ನೀಡುತ್ತದೆ. ಎರಡರಿಂದ ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಆ ಶಾಲೆಗಳು ಒಂದೆಡೆ ವಿಲೀನಗೊಳ್ಳಲಿವೆ. ಇದರಿಂದ ತರಗತಿಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಲಿದ್ದು, ಶಿಕ್ಷಕರೂ ಲಭ್ಯವಾಗಲಿದ್ದಾರೆ. ಆ ಮಕ್ಕಳು ಶಾಲೆಗೆ ತೆರಳುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು.
ಹೊರ ರಾಜ್ಯದ ಐಎಎಸ್ ಅಧಿಕಾರಿಗಳಿಗೆ ಗೋವಾದ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು. ಆ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳಿಗೆ ಕೊಂಕಣಿ ಭಾಷೆ ಕಲಿಯಲು ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು. ಕೊಂಕಣಿ ಅಕಾಡೆಮಿ ಕಟ್ಟಡ ನಿರ್ಮಾಣವಾಗಲಿದ್ದು, ಗೂಗಲ್ ನಲ್ಲಿ ಕೊಂಕಣಿ ಭಾಷಾಂತರದಿಂದ ಹಲವು ಜನರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರತೆಯ ಜವಾಬ್ದಾರಿ ಪೊಲೀಸರ ಮೇಲಿದೆ
ಮಾದಕ ದ್ರವ್ಯಗಳ ವಿರುದ್ಧ ಕೃಮ ಕೈಗೊಳ್ಳಲು ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಮಾದಕ ದ್ರವ್ಯ ದಂಧೆಗಳನ್ನು ನಿಯಂತ್ರಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಹೇಳಿದರು.