ಪಣಜಿ(ಮಡಗಾಂವ): ಗೋವಾದಿಂದ 60 ಕಿ.ಮೀ.ಅಂತರದವರೆಗಿನ ಮೀನುಗಾರರಿಗೆ ಅಂತಾರಾಜ್ಯ ಮೀನುಗಳ ಸಾಗಾಟಕ್ಕೆ ಸವಲತ್ತು ನೀಡಲಾಗುವುದು ಎಂದು ಗೋವಾ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಈ ಹಿಂದೆ ತಿಳಿಸಿದ್ದರು. ಆದರೂ, ಗೋವಾಕ್ಕೆ ಮೀನು ಪೂರೈಸಲು ಏಜೆಂಟರ ಬಳಿ ಎಫ್‌ಡಿಎ ಪರವಾನಗಿಯಿಲ್ಲದ ಕಾರಣ ಕಾರವಾರದಿಂದ ಗೋವಾ ಪ್ರವೇಶಿಸುತ್ತಿದ್ದ ಮೀನು ತುಂಬಿದ್ದ 7 ಲಾರಿಗಳನ್ನು ಪೊಲೀಸ್ ಅಧಿಕಾರಿಗಳು ಗಡಿ ಭಾಗ ಪೋಳೆ ಚೆಕ್‌ಪೋಸ್ಟ್‌ನಲ್ಲಿ ತಡೆ ಹಿಡಿದಿದ್ದಾರೆ.
ಶನಿವಾರ ಬೆಳಗಿನ ಜಾವ ಮೀನು ತುಂಬಿದ್ದ 10 ಟ್ರಕ್‌ಗಳು ಗೋವಾ ಗಡಿ ಪೋಳೆ ಚೆಕ್‌ಪೋಸ್ಟ್‌ಗೆ ಬಂದಿದ್ದವು. ಇವುಗಳಲ್ಲಿ ಫಿಶ್‌ಮಿಲ್‌ಗಾಗಿ ಬಂದಿದ್ದ 3 ಟ್ರಕ್‌ಗಳಿಗೆ ಪೊಲೀಸರು ಗೋವಾ ಪ್ರವೇಶಾವಕಾಶ ಕಲ್ಪಿಸಿದರು. ಇನ್ನುಳಿದ 7 ಲಾರಿಗಳನ್ನು ವಾಪಸ್ ಕಳುಹಿಸಲಾಯಿತು. ಅಲ್ಲದೆ, ಮಹಾರಾಷ್ಟ್ರದಿಂದ ಗೋವಾಕ್ಕೆ ಬರುತ್ತಿದ್ದ ಎಫ್‌ಡಿಎ ಪರವಾನಗಿ ಹೊಂದಿರದ ಮೀನು ತುಂಬಿದ್ದ 3 ಲಾರಿಗಳನ್ನು ಸಹ ಪತ್ರದೇವಿ ಚೆಕ್‌ಪೋಸ್ಟ್‌ನಲ್ಲಿ ತಡೆ ಹಿಡಿಯಲಾಗಿದೆ ಎಂದು ಕಾಣಕೋಣ ಪೊಲೀಸರು ತಿಳಿಸಿದ್ದಾರೆ.
ಗುರುವಾರದಿಂದ ಗೋವಾಕ್ಕೆ ಮೀನು ಪೂರೈಕೆ ಪುನಾರಂಭಗೊಳ್ಳಲಿದೆ ಎಂದು ಕರ್ನಾಟಕದ ಮೀನುಗಾರರಲ್ಲಿ ಸಮಾಧಾನ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಗೋವಾದ ಗಡಿಯಲ್ಲಿ ಮೀನು ಲಾರಿಗಳನ್ನು ತಡೆ ಹಿಡಿದು ವಾಪಸ್ ಕಳುಹಿಸಲಾಗುತ್ತಿದೆ. ಈ ಹಿಂದೆ ಕರ್ನಾಟಕದಿಂದ ಗೋವಾಕ್ಕೆ ಸುಮಾರು 90 ಟ್ರಕ್ ಮೀನುಗಳು ಪ್ರತಿದಿನ ಪೂರೈಕೆಯಾಗುತ್ತಿದ್ದವು. ಆದರೆ, ಇದೀಗ ಗೋವಾ ಎಫ್‌ಡಿಎ ದಿನದಿಂದ ದಿನಕ್ಕೆ ಹೊಸ ಕಾಯ್ದೆ ಜಾರಿಗೆ ತರುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇನ್ಸುಲೇಟೆಡ್ ವಾಹನಗಳಲ್ಲಿಯೇ ಮೀನುಗಳನ್ನು ಗೋವಾಕ್ಕೆ ತರಬೇಕೆಂದು ಎಫ್‌ಡಿಎ ನಿಯಮ ಜಾರಿಗೊಳಿಸಿತ್ತು. ಅಂತೆಯೇ ಕರ್ನಾಟಕದಿಂದ ಇನ್ಸುಲೇಟೆಡ್ ವಾಹನಗಳಲ್ಲಿಯೇ ಗೋವಾಕ್ಕೆ ಮೀನು ತರಲು ಆರಂಭಿಸಲಾಗಿತ್ತು. ಆದರೆ, ಇದೀಗ ಎಫ್‌ಡಿಎ ಪರವಾನಗಿ ಇಲ್ಲವೆಂಬ ಕಾರಣದಿಂದ ಕರ್ನಾಟಕದಿಂದ ಹಾಗೂ ಮಹಾರಾಷ್ಟ್ರದಿಂದ ಬರುವ ಮೀನು ತುಂಬಿದ ಟ್ರಕ್‌ಗಳನ್ನು ಗಡಿ ಭಾಗದಲ್ಲಿಯೇ ತಡೆ ಹಿಡಿದು ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದಾಗಿ ಹೊರ ರಾಜ್ಯಗಳ ಮೀನುಗಾರರು, ವ್ಯಾಪಾರಸ್ಥರು ಹೆಚ್ಚಿನ ತೊಂದರೆಗೆ ಸಿಲುಕುವಂತಾಗಿದೆ.