ಪಣಜಿ: ಗೋವಾದಲ್ಲಿ ಕನ್ನಡಿಗರ ಬಹು ವರ್ಷಗಳ ಕನಸು ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ದೊಡ್ಡ ಕನಸು. ಗೋವಾ ಸರ್ಕಾರದ ಬಳಿ ನಮ್ಮದು ಮನವಿಯಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಈಗಾಗಲೇ ನಿಧಿಯನ್ನು ಕೂಡ ಮಂಜೂರು ಮಾಡಿದೆ. ಆದರೆ ಇಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗದ ಅಗತ್ಯವಿದೆ. ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸಿಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ, ದಕ್ಷಿಣ ಗೋವಾ ಜಿಲ್ಲಾ ಮತ್ತು ಸಾಲಸೇಟ ತಾಲೂಕಾ ಘಟಕದ ಪದಾಧಿಕಾರಿಗಳ ಪದಗೃಹಣ ಹಾಗೂ ನೂತನ ಸದಸ್ಯತ್ವ ಅಭಿಯಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಗೋವಾ ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಸಂಸ್ಕೃತಿ ಬಹುತೇಕ ಒಂದೇ ಆಗಿದೆ. ಹಲವು ಜನ ಕನ್ನಡಿಗರ ಕುಲದೇವರು ಗೋವಾದಲ್ಲಿದೆ. ಗೋವಾದ ಹಲವು ಜನರ ಕುಲದೇವರು ಕರ್ನಾಟಕದಲ್ಲಿದೆ. ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರವು ಸೂಕ್ತ ಜಾಗ ಕಲ್ಪಿಸಿಕೊಡಬೇಕು. ಗೋವಾದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಇನ್ನು ಗೋವಾಕ್ಕೆ ಕೆಲಸಕ್ಕೆ ಬಂದು ಹೋಗುವವರನ್ನು ಸೇರಿಸಿದರೆ ಒಟ್ಟೂ ಸುಮಾರು 6 ಲಕ್ಷ ಜನ ಕನ್ನಡಿಗರು ಗೋವಾದಲ್ಲಿದ್ದಾರೆ. ಮೂಲ ಗೋವನ್ನರನ್ನು ಹೊರತುಪಡಿಸಿದರೆ ಗೋವಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವವರು ಕನ್ನಡಿಗರೇ ಆಗಿದ್ದಾರೆ ಎಂದು ನಾಡೋಜ ಡಾ. ಮಹೇಶ್ ಜೋಶಿ ನುಡಿದರು.
ಸಮಾರಂಭದ ಉಧ್ಘಾಟನೆ ನೆರವೇರಿಸಿದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ-ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಉದ್ಘಾಟನೆಯ ಸಂದರ್ಭದಲ್ಲಿ ಒಂದು ಅಧ್ಬುತ ಬದಲಾವಣೆ ನಿರ್ಮಾಣವಾಯಿತು. ಕನ್ನಡ ಭವನ ಕಟ್ಟುವ ವಿಷಯ ಕುರಿತ ಅಂದಿನ ಹೇಳಿಕೆಯು ಇಡೀ ರಾಜ್ಯಾದ್ಯಂತ ಚರ್ಚೆಯಾಯಿತು. ನಾನು ಇಲ್ಲಿಗೆ ಬೇರೆ ಎಲ್ಲ ಕೆಲಸ ಬಿಟ್ಟು ಏಕೆ ಬರುತ್ತೇನೆ ಎಂದರೆ ನೀವು ನನಗೆ ಮುಖ್ಯವಲ್ಲ, ಕನ್ನಡ ನನಗೆ ಬಹಳ ಮುಖ್ಯ. ಕನ್ನಡದ ಉಳಿವಿಗಾಗಿ ನಾವೆಲ್ಲ ಶೃಮಿಸಬೇಕು ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮಾತನಾಡಿ- ಗೋವಾದ ಹಲವು ಜನರು ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ್ದಾರೆ. ನಮ್ಮ ಕುಲದೇವರು ಕರ್ನಾಟಕದಲ್ಲಿದೆ. ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದೆ. ಗೋವಾ ಸದನ ದೆಹಲಿಯಲ್ಲಿದೆ. ಹಾಗೆಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾದರೆ ಇಲ್ಲಿಗೆ ಆಗಮಿಸುವ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ಇನ್ನು ಐದು ವರ್ಷಗಳಲ್ಲಿ ಗೋವಾದಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತಿಗೆ 1 ಲಕ್ಷ ಜನ ಸದಸ್ಯರನ್ನು ಮಾಡಬೇಕು. ಅಂದಾಗ ಮಾತ್ರ ನಮ್ಮ ಬೇಡಿಕೆಯನ್ನು ನಾವು ನೇರವಾಗಿ ಸರ್ಕಾರದ ಮುಂದಿಡಲು ಸಾಧ್ಯವಾಗುತ್ತದೆ ಮತ್ತು ನಮ್ಮ ಬೇಡಿಕೆ ಈಡೇರುತ್ತದೆ ಎಂದರು.
ಸಮಾರಂಭದ ಉದ್ಘಾಟನೆಯ ನಂತರ ದಕ್ಷಿಣ ಗೋವಾ ಜಿಲ್ಲಾ ಹಾಗೂ ಸಾಲಸೇಟ ತಾಲೂಕಾ ಘಟಕದ ಪದಾಧಿಕಾರಿಗಳ ಪದಗೃಹಣ ಸಮಾರಂಭ ನಡೆಯಿತು. ವೇದಿಕೆಯ ಮೇಲೆ ಅಥಣಿಯ ಪ.ಪೂ ಆತ್ಮಾರಾಮ ಸ್ವಾಮೀಜಿ, ಗೋವಾ ನಾವೇಲಿಂ ಶಾಸಕ ಉಲ್ಲಾಸ ತುವೇಕರ್, ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶಬಾಬು ಸುರ್ವೆ, ಕಸಾಪ ಬೆಂಗಳೂರಿನ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಜಿಸಾಬ ಕುಷ್ಠಗಿ, ಸಮಾಜಸೇವಕ ರಾಜಶೇಖರ ಸಾವಗಿ ಕಸಾಪ ದಕ್ಷಿಣ ಗೋವಾ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಕಲಿವಾಳ, ಗೌರವಾಧ್ಯಕ್ಷ ಪಡದಯ್ಯ ಹಿರೇಮಠ, ಸಾಲಸೇಟ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅನುಸೂಯಾ ದೊಡ್ಡಯ್ಯನವರ್ ಸಂಗಡಿಗರು ನಾಡಗೀತೆ ಹಾಡಿದರು, ಕು, ಪ್ರೇರಣಾ ಸಂಗಡಿಗರಿಂದ ಭರತನಾಟ್ಯ, ಸಂಗೀತ ಶಿಕ್ಷಕ ಬಾಬು ಬೂಸಾರಿ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಸಾಪ ದಕ್ಷಿಣ ಗೋವಾ ಅಧ್ಯಕ್ಷ ಪರಶುರಾಮ ಕಲಿವಾಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಕಸಾಪ ದಕ್ಷಿಣ ಗೋವಾ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಡದಯ್ಯ ಹಿರೇಮಠ ವಂದನಾರ್ಪಣೆಗೈದರು. ಕಾರ್ಯಕ್ರಮ ಆರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ರವರ ನಿಧನಕ್ಕೆ ಸಮಾರಂಭದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು.