Advertisement

ಇಫಿ ಸಿನಿಮೋತ್ಸವಕ್ಕೆ ಖಾನ್ ಅದ್ದೂರಿ ಚಾಲನೆ; 195 ಸಿನಿಮಾಗಳ ಪ್ರದರ್ಶನ

01:46 PM Nov 20, 2017 | Team Udayavani |

ಪಣಜಿ: ಇಂದಿನಿಂದ ನವೆಂಬರ್ 28ರವರೆಗೆ ನಡೆಯಲಿರುವ 48ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ(ಇಫಿ 2017) ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಸೋಮವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

Advertisement

ಗೋವಾದ ಬಾಂಬೋಲಿಮ್ ನ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿನ ಅದ್ದೂರಿ ಸಿನಿಮಾ ಉತ್ಸವವನ್ನು ಖಾನ್ ಉದ್ಘಾಟಿಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅತಿಥಿಗಳನ್ನು ಸ್ವಾಗತಿಸಿದರು. ಬಾಲಿವುಡ್ ಹಿರಿಯ ನಟರಾದ ಓಂ ಪುರಿ, ವಿನೋದ್ ಖನ್ನಾ, ಟೋಮ್ ಅಲ್ಟಾರ್, ರೀಮಾ ಲಾಗೂ ಹಿರಿಯ ನಿರ್ದೇಶಕರಾದ ಅಬ್ದುಲ್ ಮಜಿದ್, ಕುಂದನ್ ಷಾ, ದಾಸರಿ ನಾರಾಯಣ ಸೇರಿದಂತೆ ಪ್ರಮುಖರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಾಲಿವುಡ್ ನ ಶಾಹಿದ್ ಕಪೂರ್, ಸಚಿವೆ ಸ್ಮೃತಿ ಇರಾನಿ, ಗೋವಾ ರಾಜ್ಯಪಾಲೆ ಮೃದುಲಾ ಸಿನ್ನಾ, ಅನುಪಮ್ ಖೇರ್ ಸೇರಿದಂತೆ ಜಗತ್ತಿನ ಹಲವು ಗಣ್ಯರು ಪಾಲ್ಗೊಂಡಿದ್ದರು.

ನವೆಂಬರ್‌ 20 ರಿಂದ 28 ರವರೆಗೆ ಇಲ್ಲಿಯ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಥಿಯೇಟರ್‌ಗಳು,ಕಲಾ ಅಕಾಡೆಮಿಯಲ್ಲಿ ಸಿನಿಮೋತ್ಸವ (IFFI) 2017 ನಡೆಯಲಿದೆ. 

ಭಾರತೀಯ ಪನೋರಮಾ ವಿಭಾಗವನ್ನು ನಟಿ ಶ್ರೀದೇವಿ ಉದ್ಘಾಟಿಸುವರು. ಈ ಬಾರಿ ಒಟ್ಟು 10 ಅಂತಾರಾಷ್ಟ್ರೀಯ ಚಿತ್ರಗಳು ಪ್ರಥಮ ಪ್ರದರ್ಶನವನ್ನು ಇಲ್ಲಿ ಕಾಣುತ್ತಿವೆ. ಸುಮಾರು ಒಂಬತ್ತು ದಿನ ನಡೆಯುವ ಈ ಉತ್ಸವದಲ್ಲಿ ಸುಮಾರು 80 ಕ್ಕೂ ಹೆಚ್ಚು ದೇಶಗಳ 195 ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ಸ್ಪರ್ಧೆ ವಿಭಾಗವೂ ಸೇರಿದಂತೆ ಸಿನಿಮಾ ಆಫ್ ವರ್ಲ್ಡ್, ಭಾರತೀಯ ಪನೋರಮಾ (ಕಥಾ ಮತ್ತು ಕಥೇತರ), ಬ್ರಿಕ್ಸ್‌, ಬೈನೆಲೆ ಕಾಲೇಜ್‌ ಆಫ್ ವೆನಿಸ್‌ ಫಿಲ್ಮ್ ಫೆಸ್ಟಿವಲ್‌, ಐಸಿಎಫ್ ಟಿ-ಯುನೆಸ್ಕೊ ಗಾಂಧಿ ಪ್ರಶಸ್ತಿ ವಿಭಾಗ, ರೆಟ್ರಾಸ್ಪೆಕ್ಟಿವ್‌, ಹೋಮೇಜಸ್‌, ರೀಸ್ಟೋರ್‌ ಕ್ಲಾಸಿಕ್ಸ್‌, ಗೋವಾ ಸಿನಿಮಾ ಜಗತ್ತು ಇತ್ಯಾದಿ ವಿಭಾಗಗಳಿವೆ. ಈ ಚಿತ್ರೋತ್ಸವದ ಕಂಟ್ರಿ ಆಫ್ ಫೋಕಸ್‌ ವಿಭಾಗದಡಿ ಕೆನಡಾದ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. 

Advertisement

ಇನ್ನೊಂದು ವಿಶೇಷವೆಂದರೆ ಸುಮಾರು 30 ಕ್ಕೂ ಹೆಚ್ಚು ಮಹಿಳಾ ನಿರ್ದೇಶಕಿಯರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಸಿನೆಮಾ ಆಫ್ ವರ್ಲ್ಡ್ ನಲ್ಲಿ 82 ಚಿತ್ರಗಳು ಪ್ರದರ್ಶನಗೊಂಡರೆ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 15 ಚಿತ್ರಗಳು ಭಾಗವಹಿಸುತ್ತಿವೆ.  ಇದಲ್ಲದೇ, ಉಪನ್ಯಾಸ, ಚರ್ಚೆ, ಸಂವಾದವೂ ಇರಲಿದೆ.

ಏಳು ಸಾವಿರ ಮಂದಿ ಈಗಾಗಲೇ ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ ಎನ್ನುತ್ತವೆ ಇಫಿ ಮೂಲಗಳು. ಇನ್ನೂ ನಾಲ್ಕು ದಿನಗಳಿದ್ದು, ಪ್ರತಿನಿಧಿಗಳ ಸಂಖ್ಯೆ ಹತ್ತು ಸಾವಿರ ಮೀರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಸಿನಿಮೋತ್ಸವ ಸಿದ್ಧತೆ ಪೂರ್ಣಗೊಳ್ಳುವ ಹಂತದಲ್ಲಿದೆ.

ಉದ್ಘಾಟನಾ ಚಿತ್ರ ಖ್ಯಾತ ಇರಾನಿ ಚಿತ್ರ ನಿರ್ದೇಶಕ ಮಜಿದ್‌ ಮಜಿದಿ ನಿರ್ದೇಶಿಸಿ ಭಾರತದ ಜೀ ಸ್ಟುಡಿಯೋಸ್‌ ಮತ್ತು ನಮಹ ಪಿಕ್ಚರ್ ನಿರ್ಮಿಸಿರುವ ಬಿಯಾಂಡ್‌ ದಿ ಕ್ಲೌಡ್ ಚಿತ್ರ ಈ ಬಾರಿಯ ಉತ್ಸವದ ಉದ್ಘಾಟನಾ ಚಿತ್ರವಾಗಿರಲಿದೆ. ಹಾಗೆಯೇ ಸಮಾರೋಪ ಚಿತ್ರವಾಗಿ ಇಂಡೋ-ಅಜೆಂಟೈನಾ ಫಿಲ್ಮ್ ಪ್ಯಾಬ್ಲೊ ಸೀಸರ್‌ ರವರ ಥಿಂಕಿಂಗ್‌ ಆಫ್ ಹಿಮ್‌ ಚಿತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರ ನಾಥ ಠಾಗೋರ್‌ ಅವರ ಕುರಿತದದ್ದಾಗಿದೆ.

ಜೀವಿತಾವಧಿ ಪ್ರಶಸ್ತಿ
ಪ್ರತಿ ವರ್ಷ ನೀಡುತ್ತಿರುವ ವರ್ಷದ ಭಾರತೀಯ ಚಲನಚಿತ್ರ ರಂಗದ ಸಾಧಕ ಪ್ರಶಸ್ತಿಗೆ ಈ ಬಾರಿ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಜೀವಿತಾವಧಿ ಸಾಧನೆ ಪ್ರಶಸ್ತಿಗೆ ಕೆನಡಾದ ಫಿಲ್ಮ್ ಮೇಕರ್‌ ಆಟೋಂ ಇಗೋಯನ್‌ ಅವರನ್ನು ಆಯ್ಕೆ ಮಾಡಲಾಗಿದೆ. ನ. 28 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next