Advertisement

Goa: ಕಡಲತೀರಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ಅರಣ್ಯ ಇಲಾಖೆ ಕ್ರಮ

06:28 PM Apr 20, 2023 | Team Udayavani |

ಪಣಜಿ:  ಗೋವಾದ ಕಡಲತೀರಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅರಣ್ಯ ಇಲಾಖೆಯು ಕ್ರಮ ಕೈಗೊಂಡಿದೆ, ಕಡಲತೀರಗಳಲ್ಲಿ ವಾಹನಗಳು ಓಡಿಸುವುದನ್ನು ತಡೆಯಲು ಮತ್ತು ಒಟ್ಟಾರೆ ಕರಾವಳಿ ಸುರಕ್ಷತೆಗೆ ಅರಣ್ಯ ಇಲಾಖೆ ಮುಂದಾಗಿದೆ.

Advertisement

ಅದರಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆ, ವಿಷನ್ ಲೈಫ್‍ಗಾರ್ಡ್‍ಗಳು, ಪ್ರವಾಸಿ ಪೊಲೀಸರು, ಬಾರ್ ಮತ್ತು ರೆಸ್ಟೊರೆಂಟ್ ಮಾಲಕರು ಮತ್ತು ಎನ್‍ಜಿಒಗಳು ಈ ಕಾರ್ಯಚರಣೆಯಲ್ಲಿ ಭಾಗಿಯಾಗಲಿವೆ. ಈ ಇಲಾಖೆಗಳು ಕಡಲ ಜೀವವೈವಿಧ್ಯ ರಕ್ಷಣೆಯೊಂದಿಗೆ ಕರಾವಳಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆಗೆ ನೆರವು ನೀಡಲಿವೆ. ಗೋವಾ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಅವರು ಪಣಜಿಯಲ್ಲಿ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

ಸೌರಭ್ ಕುಮಾರ್ ಮಾತನಾಡಿ-ಗೋವಾದ ಕಡಲ ತೀರಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಎಲ್ಲ ಇಲಾಖೆಗಳಿಂದ ವ್ಯವಸ್ಥಿತ ಜಂಟಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿಧ ಇಲಾಖೆಗಳು, ಎನ್‍ಜಿಒಗಳು, ಪರಿಣಿತ ಸಂಸ್ಥೆಗಳು ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಸಂಪೂರ್ಣ ಕರಾವಳಿಯಲ್ಲಿ ಸಮೃದ್ಧ ಸಮುದ್ರ ಜೀವವೈವಿಧ್ಯದ ಸುರಕ್ಷತೆ, ರಕ್ಷಣೆ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಪ್ರಯತ್ನಗಳನ್ನು ಮಾಡುಲು ಮುಂದಾಗಿದೆ.

ರಾಜ್ಯ ಅರಣ್ಯ ಇಲಾಖೆಯು ಕಳೆದ ಡಿಸೆಂಬರ್‍ನಲ್ಲಿ ಮೊದಲ ಬಾರಿಗೆ ಗೋವಾ ಕರಾವಳಿಯನ್ನು ಎರಡು ಸಮುದ್ರ ಶ್ರೇಣಿಗಳಾಗಿ ವಿಂಗಡಿಸಿತ್ತು. ಕಡಲತೀರಗಳಲ್ಲಿ ವಾಹನ ಚಾಲನೆಯಂತಹ ನಿಯಮ ಉಲ್ಲಂಘನೆಗಳಿಂದ ಗೋವಾದ ಕರಾವಳಿಯನ್ನು ರಕ್ಷಿಸಲು ರಾಯಭಾರಿಗಳಾಗಿ ಕಾರ್ಯನಿರ್ವಹಿಸಲು ಅರಣ್ಯ ಇಲಾಖೆಯು ಮುಂದಾಗಿದೆ. ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ  ಈ ಕುರಿತಂತೆ ಎರಡು ಸಭೆಗಳು ನಡೆದಿದ್ದು, ಮೂರನೇ ಸಭೆ ಶೀಘ್ರದಲ್ಲೇ ನಡೆಯಲಿದೆ. ಸಭೆಯಲ್ಲಿ ಎಲ್ಲಾ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯದ ಅಗತ್ಯತೆ ಕುರಿತು ಚರ್ಚಿಸಲಾಯಿತು. ಸಭೆಯು ಸಮುದ್ರ ರಕ್ಷಣೆಗಾಗಿ ಪ್ರಮಾಣಿತ ಪ್ರೋಟೋಕಾಲ್ ಅನ್ನು ಸಹ ಒಪ್ಪಿಕೊಂಡಿದೆ ಎಂದು ಗೋವಾ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮಾಹಿತಿ ನೀಡಿದರು.

ಕರಾವಳಿ ಸುರಕ್ಷತೆಗೆ ಹೆಚ್ಚಿನ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕಡಲತೀರಗಳಲ್ಲಿ ವಾಹನ ಚಲಾಯಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದರ ಅನುಷ್ಠಾನಕ್ಕೆ ಗಮನ ಹರಿಸಲಾಗುವುದು. ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ಮತ್ತು ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿಯಂತಹ ಸಂಸ್ಥೆಗಳು ಸಹ ಸಹಕಾರ ನೀಡಲಿದೆ. ಅರಣ್ಯ ಇಲಾಖೆಯು ಕಡಲ ತೀರದ ಆಮೆ ಸಂರಕ್ಷಣಾ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಹವಳ ಮತ್ತು ಬಂಡೆಗಳ ಸಂರಕ್ಷಣೆ, ಸಮುದ್ರ ಜೀವ ವೈವಿದ್ಯ ಸಂರಕ್ಷಣೆಗಾಗಿ “ಮರಿನ್ ರೆಂಜೆಸ್”ನ್ನು ಸ್ಥಾಪಿಸಿದೆ ಎಂದು ಗೋವಾ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next