ಪಣಜಿ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 6 ರಂದು ಗೋವಾದ ಮಡಗಾಂವನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಡಗಾಂವ್ ಬಸ್ ನಿಲ್ದಾಣದ ಮೈದಾನದಲ್ಲಿ ರ್ಯಾಲಿ ನಡೆಯಲಿದ್ದು, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಈಗಿರುವ ಬಸ್‍ಗಳನ್ನು ಬಸ್ ನಿಲ್ದಾಣದಿಂದ ಎಸ್‍ಎಜಿ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸೋಮವಾರ ಅಧಿಸೂಚನೆ ಹೊರಡಿಸಿದ್ದರು. ಸಭೆಯ ಹಿನ್ನಲೆಯಲ್ಲಿ ಫೆಬ್ರವರಿ 1 ರಿಂದ ಫೆಬ್ರವರಿ 8 ರ ನಡುವೆ ಕೆಟಿಸಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲು ಅಧಿಸೂಚನೆ ಹೊರಡಿಸಲಾಗಿದೆ.
ಅಂತರರಾಜ್ಯ ಬಸ್‍ಗಳನ್ನು ಈಗಾಗಲೇ ಎಸ್‍ಜಿಪಿಡಿಎ ಪಾರ್ಕಿಂಗ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಕದಂಬ ಬಸ್‍ಗಳನ್ನು ಈಜುಕೊಳದ ಬಳಿಯ ಕ್ರೀಡಾ ಪ್ರಾಧಿಕಾರದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಭೆಯಲ್ಲಿ ಮಾತನಾಡುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯ ಸರ್ಕಾರದ ಸಾಧನೆ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಾಸಕ ದಿಗಂಬರ್ ಕಾಮತ್ ಹೇಳಿದರು. ಸಂಚಾರ ದಟ್ಟಣೆ ತಪ್ಪಿಸಲು ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ದಕ್ಷಿಣ ಗೋವಾದಲ್ಲಿ ಇದು ಪ್ರಧಾನಿಗಳ ಮೊದಲ ಸಭೆಯಾಗಿದ್ದು, ಜನಸಂದಣಿಯನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಅಧಿಕಾರಿಗಳು, ಪೊಲೀಸರು ಇದಕ್ಕೆ ಸಜ್ಜಾಗಿದ್ದಾರೆ. ಈ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿರುವ ಆವರಣದಲ್ಲಿರುವ ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: SC/ST ಪೊಲೀಸ್ ಠಾಣೆಯಲ್ಲಿ ED ವಿರುದ್ಧವೇ ಪ್ರಕರಣ ದಾಖಲಿಸಿದ ಸೊರೇನ್!