ಪಣಜಿ: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರತಿ ಪಕ್ಷದ ನಾಯಕ ಸ್ಥಾನಕ್ಕೆ ಯುವ ನಾಯಕರನ್ನು ನಿಯುಕ್ತಿಗೊಳಿಸಲಾಗಿರುವುದರಿಂದ 2024 ರ ಲೋಕಸಭಾ ಚುನಾವಣೆ ಹಾಗೂ 2027 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಯುವ ಪೀಳಿಗೆಯು ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ಪಿ.ಚಿದಂಬರಂ ಹೇಳಿದರು.
ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಅಮಿತ್ ಪಾಟ್ಕರ್ ರವರಿಗೆ ಅಧಿಕಾರ ಹಸ್ತಾಂತರಿಸಲು ಪ್ರದೇಶ ಕಾಂಗ್ರೆಸ್ ಸಮಿತಿ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ಯುವ ಟೀಂ ನಿಭಾಯಿಸಲಿದೆ. ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಗೋವಾದ ಯುವ ನಾಯಕರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಿದ್ದಾರೆ. ಪಕ್ಷದ ಉಜ್ವಲ ಭವಿಷ್ಯಕ್ಕಾಗಿ ಯುವ ನಾಯಕರು ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಪಿ.ಚಿದಂಬರಂ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಮಾತನಾಡಿ- ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸುವ ಹಕ್ಕು ಪ್ರದೇಶ ಕಾಂಗ್ರೆಸ್ ಪಕ್ಷಕ್ಕೇ ಇರಬೇಕು. ಎರಡು ವರ್ಷ ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೂಲಕ ಕೆಲಸ ಆರಂಭಿಸಿದರೆ ಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ. ಅಭ್ಯರ್ಥಿಗಳ ಆಯ್ಕೆ ನಿರ್ಧಾರದಲ್ಲಿ ಕಾಂಗ್ರೆಸ್ ವಿಳಂಬ ಮಾಡಿದ್ದರಿಂದ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಸಾಕಷ್ಟು ಸಮಯ ಸಿಕ್ಕಿಲ್ಲ. ಪಕ್ಷ ತೊರೆದಿರುವವರನ್ನು ಮರಳಿ ಕರೆತರಲು ಪ್ರದೇಶ ಕಾಂಗ್ರೆಸ್ ಸಮೀತಿ ಪ್ರಾಧಾನ್ಯ ನೀಡಬೇಕು ಎಂದು ರಾಜ್ಯ ಪ್ರತಿಪ್ಷದ ನಾಯಕ ಮೈಕಲ್ ಲೋಬೊ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನೂತನ ಪ್ರದೇಶಾಧ್ಯಕ್ಷ ಅಮಿತ್ ಪಾಟ್ಕರ್, ಕಾಂಗ್ರೇಸ್ ಮಾಜಿ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಶಾಸಕ ದಿಗಂಬರ್ ಕಾಮತ್, ಶಾಸಕ ರುಡಾಲ್ಫ ಫರ್ನಾಂಡಿಸ್, ಮತ್ತಿತರರು ಉಪಸ್ಥಿತರಿದ್ದರು.