ಪಣಜಿ:ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಟಿಕೆಟ್ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಾನು ಆಡಳಿತಾರೂಢ ಬಿಜೆಪಿ ಪಕ್ಷವನ್ನು ತೊರೆಯಲು ನಿರ್ಧರಿಸಿರುವುದಾಗಿ ಗೋವಾ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಲಕ್ಷ್ಮಿಕಾಂತ್ ಪರ್ಸೆಕರ್ ಶನಿವಾರ (ಜನವರಿ 22)ತಿಳಿಸಿದ್ದಾರೆ.
ಇದನ್ನೂ ಓದಿ:ವಿವಾಹ ಸಮಾರಂಭದಲ್ಲಿ ವಧು ಡ್ಯಾನ್ಸ್…ವರನಿಂದ ಕಪಾಳಮೋಕ್ಷ…ಮುಂದೆ ನಡೆದಿದ್ದೇನು ಗೊತ್ತಾ?
ಪಿಟಿಐ ಜೊತೆ ಮಾತನಾಡಿದ ಪರ್ಸೇಕರ್, ತಾನು ಬಿಜೆಪಿ ಪಕ್ಷದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ, ಇಂದು ಸಂಜೆ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದಾರೆ.
ನಾನೀಗ ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಮುಂದೇನು ನಿರ್ಧಾರ ತೆಗೆದುಕೊಳ್ಳಬೇಕೆಂಬ ಬಗ್ಗೆ ನಂತರ ನಿರ್ಧರಿಸುವುದಾಗಿ ಪರ್ಸೇಕರ್ ತಿಳಿಸಿದ್ದಾರೆ. ಮಾಂಡ್ರೆಮ್ ಕ್ಷೇತ್ರದಲ್ಲಿ ಸೋಪ್ಟೆ ಮೂಲ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪರ್ಸೇಕರ್ ಆರೋಪಿಸಿದ್ದಾರೆ.
2002 ಮತ್ತು 2017ರಲ್ಲಿ ಲಕ್ಷ್ಮೀಕಾಂತ್ ಪರ್ಸೇಕರ್ ಪ್ರತಿನಿಧಿಸಿದ್ದ ಮಾಂಡ್ರೆಮ್ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ದಯಾನಂದ್ ಸೋಪ್ಟೆ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. 2017ರಲ್ಲಿ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೋಪ್ಟೆ ಪ್ರತಿಸ್ಪರ್ಧಿ ಬಿಜೆಪಿಯ ಪರ್ಸೇಕರ್ ಅವರನ್ನು ಪರಾಜಯಗೊಳಿಸಿದ್ದರು. ಆದರೆ 2019ರಲ್ಲಿ ಸೋಪ್ಟೆ ಹಾಗೂ ಇತರ 9 ಮುಖಂಡರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.