Advertisement
40 ಸ್ಥಾನಗಳ ಪೈಕಿ ಬಿಜೆಪಿ 20, ಕಾಂಗ್ರೆಸ್ 11, ಆಪ್ ಎರಡು, ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ರೆವೆಲ್ಯೂಷನರಿ ಗೋವನ್ ಪಾರ್ಟಿ ತಲಾ 1, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ 2 ಹಾಗೂ ಮೂವರು ಪಕ್ಷೇತರರು ಜಯ ಗಳಿಸಿದ್ದಾರೆ. ಬಹುಮತಕ್ಕೆ 21 ಸ್ಥಾನ ಅಗತ್ಯವಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇನ್ನೊಂದು ಸ್ಥಾನಕ್ಕಾಗಿ ಕಸರತ್ತು ನಡೆದಿದ್ದು, ಮೂವರು ಪಕ್ಷೇತರರು, ಎಂಜಿಪಿಯ ಇಬ್ಬರು ಹಾಗೂ ಜಿಎಫ್ಪಿಯ ಓರ್ವ ಅಭ್ಯರ್ಥಿ ಬೆಂಬಲ ನೀಡಲು ಮುಂದೆ ಬಂದಿದ್ದಾರೆ ಎಂದು ಸಿಎಂ ಪ್ರಮೋದ್ ಸಾವಂತ್ ಹಾಗೂ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಲು ಸಜ್ಜಾಗಿದ್ದು, ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದಾರೆ.
Related Articles
Advertisement
ಫಲಿತಾಂಶ ಮುನ್ನಾ ದಿನವೇ ತನ್ನೆಲ್ಲ ಅಭ್ಯರ್ಥಿಗಳನ್ನು ಹೋಟೆಲ್‌ಗೆ ಶಿಫ್ಟ್ ಮಾಡಿತ್ತು. ಆದರೆ, ಗುರುವಾರ ಫಲಿತಾಂಶ ತದ್ವಿರುದ್ಧವಾಗಿ ಬಂದಿದ್ದರಿಂದ ಕಾಂಗ್ರೆಸ್ ನಾಯಕರಲ್ಲಿ ನಿರಾಶೆ ಛಾಯೆ ಮೂಡಿಸಿತು. 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರಿಂದ ಕಡಲ ತಡಿಯ ನಾಡಲ್ಲಿ ಅಧಿಕಾರ ಹಿಡಿಯುವ ಕನಸು ನುಚ್ಚುನೂರಾಯಿತು.ಪಕ್ಷೇತರರಿಗೆ ಗಾಳ: ಸ್ಪಷ್ಟ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು ಬಿಜೆಪಿ 20 ಸ್ಥಾನ ಗಳಿಸಿದ್ದು, ಇನ್ನೊಂದು ಸ್ಥಾನಕ್ಕಾಗಿ ಪರದಾಡುವಂತಾಗಿದೆ. ಮೂಲಗಳ ಪ್ರಕಾರ ಮೂವರು ಪಕ್ಷೇತರರು, ಎಂಜಿಪಿಯ ಇಬ್ಬರು, ಜಿಎಫ್ಪಿಯ ಓರ್ವ ಅಭ್ಯರ್ಥಿ ಬೆಂಬಲ ನೀಡಲು ಸಜ್ಜಾಗಿದ್ದು, ಶೀಘ್ರವೇ ಬಿಜೆಪಿ ಸರಕಾರ ರಚನೆ ಪ್ರಕ್ರಿಯೆ ಆರಂಭಿಸಲಿದೆ. ಇದಕ್ಕಾಗಿ ಸಿ.ಟಿ. ರವಿ, ದೇವೇಂದ್ರ ಫಡ್ನವೀಸ್, ಪ್ರಮೋದ್ ಸಾವಂತ್ ರಣತಂತ್ರ ಹೆಣೆಯುತ್ತಿದ್ದು, ಹೈಕಮಾಂಡ್ ಅಣತಿಗೆ ಕಾಯುತ್ತಿದ್ದಾರೆ. ಸ್ವತಃ ಅಮಿತ್ ಶಾ ಗೋವಾ ಸರಕಾರ ರಚನೆ ಬಗ್ಗೆ ಮುತುವರ್ಜಿ ಬಹಿಸಿದ್ದು, ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಬಿಜೆಪಿ ಗೆಲುವಿಗೆ ಕಾರಣ?
ಮನೋಹರ ಪರೀಕ್ಕರ್ ನಿಧನದ ಬಳಿಕ ಗೋವಾ ಬಿಜೆಪಿ ಯಲ್ಲಿ ಕೊಂಚ ತಳಮಳ ಸೃಷ್ಟಿಯಾಗಿತ್ತು. ಪ್ರಮೋದ ಸಾವಂತ್ ಅವರು ಪರೀಕ್ಕರ್ ಅನುಪಸ್ಥಿತಿ ತುಂಬುವಲ್ಲಿ ಯಶಸ್ವಿ ಯಾದರು. ಅಲ್ಲದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ಸ್ವತ್ಛ ಆಡಳಿತ ನೀಡಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್. ಅಲ್ಲದೇ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು ಬಿಜೆಪಿ 20 ಕ್ಷೇತ್ರಗಳಲ್ಲಿ ಜಯ ಸಾಧಿಸಲು ಕಾರಣವಾಯಿತು. ಕಾಂಗ್ರೆಸ್ ಸೋಲಿಗೆ ಕಾರಣ?
ಕಳೆದ ಬಾರಿ 17 ಸ್ಥಾನ ಗಳಿಸಿದ್ದರೂ ಸರಕಾರ ರಚಿಸದೆ ಇರುವು ದರಿಂದ ಪಕ್ಷದ ಕೆಲವು ನಾಯಕರು ಬಿಜೆಪಿ ಸೇರ್ಪಡೆಯಾದರು. ತೆರವಾದ ಕ್ಷೇತ್ರಗಳಿಗೆ ಬಲಿಷ್ಠ ಅಭ್ಯರ್ಥಿಗಳು ಸಿಗಲಿಲ್ಲ. ಅದೆಲ್ಲ ಕ್ಕಿಂತ ಹೆಚ್ಚಾಗಿ ಆಪ್-ಟಿಎಂಸಿ ಸ್ಪರ್ಧೆಯಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಸೋಲು ವಂತಾಯಿತು. “ಗಣಿಗಾರಿಕೆ ಆರಂಭ’ ವಿಷಯ ಪ್ರಚಾರದಲ್ಲಿ ಅಸ್ತ್ರವಾಗಿ ಬಳಸುವಲ್ಲಿ ಹಿಂದೆ ಬಿದ್ದಿತು. ಕನ್ನಡಿಗರ ಸಾರಥ್ಯ
ಕರ್ನಾಟಕದ ಜತೆ ಗಡಿ ಹಂಚಿಕೊಂಡಿರುವ ಗೋವಾ ರಾಜ ಕಾರಣದಲ್ಲೂ ಕನ್ನಡಿಗರ ಪ್ರಭಾವ ಹೆಚ್ಚಿದೆ. ಅಲ್ಲಿನ ನಾಯಕರ ಗೆಲುವಿನಲ್ಲೂ ಕರುನಾಡಿನ ಮತದಾರರು ಹಾಗೂ ನಾಯಕರ ಕೊಡುಗೆ ಅನನ್ಯ. ಕಾಂಗ್ರೆಸ್‌ನಿಂದ ದಿನೇಶ ಗುಂಡೂರಾವ್, ಬಿಜೆಪಿಯಿಂದ ಸಿ.ಟಿ. ರವಿ ಉಸ್ತುವಾರಿಯಾಗಿ ತೆರಳಿದ್ದರು. ಅಲ್ಲಿಯೇ ಬೀಡು ಬಿಟ್ಟು ಇಬ್ಬರೂ ನಾಯಕರು ರಣತಂತ್ರ ಹೆಣೆದಿದ್ದರು. ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಸಿಗದೆ ದಿನೇಶ ಗುಂಡೂರಾವ್ ಅ ವ ರಿಗೆ ನಿರಾಶೆಯಾದರೆ, ಬಿಜೆಪಿ ಗೆಲುವಿನ ದಡ ಮುಟ್ಟಿಸುವಲ್ಲಿ ಸಿ.ಟಿ. ರವಿ ಯಶಸ್ವಿಯಾಗಿದ್ದಾರೆ. ಡಿಕೆಶಿ ಕಣ್ಗಾವಲು
ಕಳೆದ ಬಾರಿ ಅತಿ ಹೆಚ್ಚು ಸ್ಥಾನ ಪಡೆದರೂ ದಿಗ್ವಿಜಯಸಿಂಗ್ ಉಸ್ತುವಾರಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ “ಮುನ್ನೆಚ್ಚರಿಕೆ ಕ್ರಮ’ವಾಗಿ ಫಲಿತಾಂಶಕ್ಕೂ ಒಂದು ದಿನ ಮುನ್ನವೇ ತನ್ನೆಲ್ಲ ಅಭ್ಯರ್ಥಿಗಳನ್ನು ಗೋವಾದ ಗ್ರೇಸ್ ಮೆಜೆಸ್ಟಿಕ್ ಹೋಟೆಲ್‌ಗ ಸಾಗಿಸಿತ್ತು. ಅಧಿಕಾರದ ಪ್ರಕ್ರಿಯೆ ಮುಗಿಯುವವರೆಗೂ ಅಲ್ಲಿಂದ ಹೊರಬಾರದಂತೆ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೂಡ ಗೋವಾಗೆ ತೆರಳಿ ಉಸ್ತುವಾರಿ ನೋಡಿಕೊಂಡಿದ್ದರು. ಅತಂತ್ರವಾದರೆ ಟಿಎಂಸಿ ಹಾಗೂ ಪಕ್ಷೇತರರ ಸಹಾಯ ಪಡೆದು ಸರ್ಕಾರ ರಚನೆಯ ತಂತ್ರ ಕೂಡ ಹೆಣೆದಿದ್ದರು. ಆದರೆ, ವ್ಯತಿರಿಕ್ತ ಫಲಿತಾಂಶ ಬಂದಿದ್ದರಿಂದ ಕಾಂಗ್ರೆಸ್‌ನ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿಸಿದೆ. ಕಣದಿಂದ ಹಿಂದೆ ಸರಿದ ಮಾವ ಅನಾಯಾಸವಾಗಿ ಗೆದ್ದ ಸೊಸೆ
ಪೊರೇಮ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಾಪಸಿಂಗ್ ರಾಣೆಗೆ ಬಿಜೆಪಿಯಿಂದ ಸೊಸೆ ಡಾ|ದಿವ್ಯಾ ರಾಣೆ ಸ್ಪರ್ಧೆಯೊಡ್ಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಪ್ರತಾಪಸಿಂಗ್ ರಾಣೆ ಕಣದಿಂದ ಹಿಂದೆ ಸರಿದಿದ್ದರಿಂದ ಸೊಸೆ ಡಾ|ದಿವ್ಯಾ ರಾಣೆ ಆಪ್ ಅಭ್ಯರ್ಥಿ ವಿಶ್ವಜೀತ್ ರಾಣೆ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ್ದಾರೆ. ನಡೆಯದ ದೀದಿ ಕಮಾಲ್
ಪಶ್ಚಿಮ ಬಂಗಾಳದಲ್ಲಿ ದಿಲ್ಲಿ ನಾಯಕರಿಗೆ ಗುಟುರು ಹಾಕಿ ಅಧಿಕಾರ ಉಳಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಗೋವಾದಲ್ಲಿ ಮುಖಭಂಗ ಅನುಭವಿಸಿದ್ದಾರೆ. ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್, ಮಮತಾ ಬ್ಯಾನರ್ಜಿ ಸೇರಿ ಕಣಕ್ಕಿಳಿಸಿದ್ದ ಎಲ್ಲ ಅಭ್ಯರ್ಥಿಗಳು ಸೋಲನುಭವಿಸಿದ್ದು, ಖಾತೆ ತೆರೆಯದೆ ಆಲ್ ಔಟ್ ಆಗಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಏನಾಯ್ತು?
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಕಾದಾಟ ನಡೆಯಲಿದೆ ಎನ್ನಲಾಗಿತ್ತು. ಪರಿಸ್ಥಿತಿ ಅತಂತ್ರ ವಾಗಿದ್ದರೂ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಟಕ್ಕರ್ ನೀಡಲೇ ಇಲ್ಲ. ಗೋವಾ ಜನತೆ ಮತ್ತೂಮ್ಮೆ ಆಶೀರ್ವದಿಸಿದ್ದಾರೆ. 20 ಅಭ್ಯರ್ಥಿಗಳು ಜಯ ಸಾಧಿಸಿದ್ದು ಪಕ್ಷೇತರರು ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ಶೀಘ್ರವೇ ಸರಕಾರ ರಚಿಸಿ ಮತ್ತೂಮ್ಮೆ ಉತ್ತಮ ಆಡಳಿತ ನೀಡುತ್ತೇವೆ.
-ಪ್ರಮೋದ ಸಾವಂತ, ಗೋವಾ ಸಿಎಂ
ಉತ್ತಮ ಆಡಳಿತಕ್ಕೆ ಬೆಂಬಲ ನೀಡಿದ ಗೋವಾದ ಜನತೆಗೆ ಅಭಿನಂದನೆಗಳು. ಪಕ್ಷೇತರರು ಬೆಂಬಲ ನೀಡಲಿದ್ದು, ವಿಶ್ವಾಸಮತ ಯಾಚನೆ ವೇಳೆ ಬಿಜೆಪಿ ಸದಸ್ಯರ ಸಂಖ್ಯೆ 25 ಆಗಲಿದೆ. ಸಂಪೂರ್ಣ ಬಹುಮತ ಸಿಗಲಿದೆ.
-ಸಿ.ಟಿ.ರವಿ, ಗೋವಾ ಬಿಜೆಪಿ ಉಸ್ತುವಾರಿ ಗೋವಾ ಜನತೆ ನೀಡಿದ ತೀರ್ಪು ಸ್ವಾಗತಿಸುತ್ತೇವೆ. ಬಿಜೆಪಿ ಕೇವಲ ಶೇ.33 ಮತಗಳನ್ನು ಪಡೆದಿದೆ. ಆಪ್, ಟಿಎಂಸಿ ಸ್ಪರ್ಧೆಯಿಂದ ಇನ್ನುಳಿದ ಮತಗಳು ವಿಭಜನೆಯಾಗಿದ್ದು, ಪಕ್ಷದ ಸೋಲಿಗೆ ಕಾರಣವಾಗಿದೆ.
-ಪಿ. ಚಿದಂಬರಂ, ಮಾಜಿ ಸಚಿವ