Advertisement

ಗೋವಾ: ಗಣಿಗಾರಿಕೆ ನಿಷೇಧದ ಸಂದರ್ಭ ಟ್ರಕ್ ಚಾಲಕರಿಗೆ 148 ಕೋಟಿ ರೂ. ಪರಿಹಾರ

04:04 PM Jul 20, 2022 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಗಣಿಗಾರಿಕೆ ನಿಷೇಧದ ಸಂದರ್ಭದಲ್ಲಿ ನಿರುದ್ಯೋಗಿಗಳಾಗಿರುವ 6999  ಟ್ರಕ್ ಚಾಲಕರಿಗೆ 148 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಅಲ್ಲದೇ ಗಣಿ ಹಾನಿಯಿಂದ ನಿರುದ್ಯೋಗಿಗಳಾದ ಸುಮಾರು 2000 ನೌಕರರಿಗೆ 15 ಕೋಟಿ ಪರಿಹಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು  ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಗೋವಾ ರಾಜ್ಯದಲ್ಲಿ ಗಣಿಗಳು ಪ್ರಾರಂಭವಾಗದಿದ್ದರೆ, ಆರ್ಥಿಕ ನೆರವು ನೀಡುವ ಯೋಜನೆಯನ್ನು ಮುಂದುವರಿಸಲು ಸರ್ಕಾರ ಯೋಜಿಸಿದೆಯೇ? ಎಂದು ಕಾಂಗ್ರೆಸ್ ಶಾಸಕ ದಿಗಂಬರ್ ಕಾಮತ್ ರಾಜ್ಯದ ಗಣಿಗಾರಿಕೆಯ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾನೂನುಬದ್ಧವಾಗಿ ಗಣಿಗಾರಿಕೆ ಹಾಗೂ ಸುಸ್ಥಿರ ಗಣಿಗಾರಿಕೆ ಆರಂಭಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆಯಲಾಗಿದೆ ಎಂದರು.

ಗಣಿಗಾರಿಕೆ ನಿಷೇಧದ ಸಮಯದಲ್ಲಿ, ಸರ್ಕಾರವು ಈ ಯೋಜನೆಯಡಿ 2013 ರಿಂದ 2018 ರವರೆಗೆ ಟ್ರಕ್ ಚಾಲಕರು ಮತ್ತು ನಿರುದ್ಯೋಗಿ ಗಣಿ ಕಾರ್ಮಿಕರಿಗೆ ನೆರವು ನೀಡಿದೆ. ಈ ಅವಧಿಯಲ್ಲಿ ಟ್ರಕ್ ಚಾಲಕರು ಮತ್ತು ಗಣಿಗಾರರಿಗೆ ಆರಂಭದಲ್ಲಿ ವಾರ್ಷಿಕ 1.44 ಲಕ್ಷ ಸಹಾಯವನ್ನು ನೀಡಲಾಯಿತು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಆರ್ಥಿಕ ನೆರವು ಯೋಜನೆಯನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ
ಗಣಿ ಸಂತ್ರಸ್ತರಿಗೆ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ 2013ರಲ್ಲಿ ಯೋಜನೆ ಪ್ರಕಟಿಸಿತ್ತು. ಅದರಲ್ಲಿ ಖನಿಜ ಟ್ರಕ್ ಚಾಲಕರು ಮತ್ತು ಗಣಿಗಾರಿಕೆ ನಿಷೇಧದಿಂದ ಪ್ರಭಾವಿತರಾದ ನೌಕರರು ಸೇರಿದ್ದಾರೆ. ಯೋಜನೆಯಡಿ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪರಿಹಾರ ನೀಡಲಾಗಿದೆ. ಗಣಿಗಳನ್ನು ಹರಾಜು ಮಾಡುವ ಮೂಲಕ ಗಣಿಗಾರಿಕೆ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿರುವುದರಿಂದ ಈ ಯೋಜನೆಯನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಾವಂತ್ ಅಧಿವೇಶನದಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next