Advertisement

ಹಳ್ಳಿಗೆ ಹೋಗಿ 3 ವರ್ಷ ಸೇವೆ ಮಾಡಿ

06:25 AM Mar 31, 2018 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಕೋಟಾದಡಿ ಸೇರುವ ಅಭ್ಯರ್ಥಿಗಳು ಮೂರು ವರ್ಷಗಳ ಕಾಲ ಗ್ರಾಮೀಣ ಸೇವೆ ಅಥವಾ ಸರ್ಕಾರ ಸೂಚಿಸುವ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು.

Advertisement

ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಕೋಟಾದಡಿ ಓದುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮವನ್ನು ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಒಂದು ವರ್ಷದ ಬದಲು ಮೂರು ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ತನ್ನ ವೆಬ್‌ಸೈಟ್‌ನಲ್ಲಿ ಬದಲಾಗಿರುವ ನಿಯಮದ ಕುರಿತು ಸುತ್ತೋಲೆ ಪ್ರಕಟಿಸಿದೆ.

ವೈದ್ಯಕೀಯ ವಿದ್ಯಾರ್ಥಿಗಳು ಪದವಿ ನಂತರ ಐದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಪದವಿ ಪೂರೈಸಿದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕೆಂಬ ನಿಯಮ ಸದ್ಯ ಚಾಲ್ತಿಯಲ್ಲಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯವಾಗಿದ್ದು, ಅದನ್ನು ಮೂರು ವರ್ಷಕ್ಕೆ ವಿಸ್ತರಿಸಲಾಗಿದೆ.

ಸರ್ಕಾರಿ ಕಾಲೇಜು ಮತ್ತು ಸರ್ಕಾರಿ ಕೋಟಾದಡಿ ವೈದ್ಯಕೀಯ, ದಂತವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಸೂಚಿಸಿದ ಪ್ರದೇಶದಲ್ಲಿ ಮೂರು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ವೈದ್ಯಕೀಯ ಕಾಲೇಜುಗಳಿಗೂ ಇದನ್ನು ಕಳುಹಿಸಲಾಗುತ್ತದೆ. ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಪಡೆಯುವ ವಿದ್ಯಾರ್ಥಿಗಳು ಮೂರು ವರ್ಷ ಕಡ್ಡಾಯ ಸೇವೆಯ ಮುಚ್ಚಳಿಕೆ ಬರೆದುಕೊಡಲೇ ಬೇಕು. ಒಂದು ವೇಳೆ ಮುಚ್ಚಳಿಕೆ ಬರೆಯದೇ ಇದ್ದರೆ ಸೀಟು ರದ್ದಾಗುವ ಸಾಧ್ಯತೆಯೂ ಇದೆ. ಆದರೆ, ಸೀಟು ರದ್ದತಿ ಸಂಬಂಧ ಅಂತಿಮ ನಿರ್ಧಾರವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐದು ವರ್ಷ ಕಡ್ಡಾಯ ಸೇವೆ: ಸರ್ಕಾರಿ ಕೋಟಾದಡಿ ಸೀಟು ಪಡೆದ ಸಾಮಾನ್ಯ ಅಭ್ಯರ್ಥಿಗಳಿಗೆ ಮೂರು ವರ್ಷದ ಕಡ್ಡಾಯ ಸೇವೆ ಅನ್ವಯವಾಗುತ್ತದೆ. ಇನ್ನು ಸರ್ಕಾರಿ ಕೋಟಾದ ಸೀಟುಗಳನ್ನು ಮೀಸಲಾತಿಯಡಿ ಉಚಿತವಾಗಿ ಪಡೆಯುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ವಿವಿಧ ವರ್ಗದ ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯ ನಂತರ ಐದು ವರ್ಷ ಕಡ್ಡಾಯ ಸೇವೆ ಮಾಡಬೇಕು. ಸರ್ಕಾರ ಸೂಚಿಸುವ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಿದಟಛಿರಿರಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Advertisement

ಗ್ರಾಮೀಣ ಸೇವೆಗೆ ವೈದ್ಯರ ನಕಾರ: ರಾಜ್ಯದ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿದೆ. ವೈದ್ಯರ ಭರ್ತಿಗೆ ಸರ್ಕಾರ ಇಲ್ಲದ ಸಾಹಸ ಮಾಡುತ್ತಿದೆ. ಆದರೂ, ಗ್ರಾಮೀಣ ಭಾಗದಲ್ಲಿ ಖಾಲಿ ಇರುವ ಸರ್ಕಾರಿ ವೈದ್ಯರ ಹುದ್ದೆ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಕೋಟಾದಡಿ ಸೀಟು ಪಡೆದ ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿ,ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಗ್ರಾಮೀಣ ಸೇವೆಗೆ ಹೋಗಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಮೂಲ ಕಾರಣ. ಸರ್ಕಾರ ವಿಧಿಸುವ ದುಬಾರಿ ದಂಡ ಪಾವತಿಸಲು ವೈದ್ಯರು ಸಿದ್ಧರಿಸಿದ್ದಾರೆ. ಆದರೆ, ಗ್ರಾಮೀಣ ಸೇವೆ ಹೋಗುತ್ತಿಲ್ಲ. ಹೀಗಾಗಿ ಸರ್ಕಾರ ನಿಯಮ ಬದಲಾವಣೆ ಮಾಡಿದೆ.

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಸರ್ಕಾರಿ ಕಾಲೇಜು ಮತ್ತು ಸರ್ಕಾರ ಕೋಟಾದಡಿ ಖಾಸಗಿ ಕಾಲೇಜಿಗೆ ಸೇರುವ
ಎಲ್ಲಾ ವಿದ್ಯಾರ್ಥಿಗಳಿಂದ ಮೂರು ವರ್ಷದ ಕಡ್ಡಾಯ ಸೇವೆಯ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ. ನ್ಯಾಯಾಲಯದಲ್ಲಿರುವ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.

–  ಡಾ.ಎಸ್‌.ಸಚ್ಚಿದಾನಂದ,
ನಿರ್ದೇಶಕ, ವೈದ್ಯಕೀಯ ಶಿಕ್ಷಣ ಇಲಾಖೆ

ಸರ್ಕಾರಿ ಸೀಟು ಪಡೆದು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ ಪೂರೈಸಿದ ಅಭ್ಯರ್ಥಿಗಳು ಸರ್ಕಾರ ಸೂಚಿಸುವ
ಪ್ರದೇಶದಲ್ಲಿ ಕನಿಷ್ಠ 3 ವರ್ಷ ಕಡ್ಡಾಯ ಸೇವೆ ಮಾಡಬೇಕೆಂದು ಸರ್ಕಾರ ನಿಯಮ ರೂಪಿಸಿದೆ. ಅದರಂತೆ ಸುತ್ತೋಲೆಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ.

–  ಗಂಗಾಧರಯ್ಯ, ಕೆಇಎ ಆಡಳಿತಾಧಿಕಾರಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next