Advertisement

ಗಾಲೆ ಅಂಕಣ ಬದಲಾಯಿಸಲು ಸಿಬಂದಿಗೇ ಗಾಳ!

06:40 AM May 27, 2018 | |

ದುಬಾೖ: ಎಲ್ಲವೂ ತಣ್ಣಗಾಯಿತು ಎನ್ನುವಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೂಂದು ವಿವಾದ ಭುಗಿಲೆದ್ದಿದೆ. ಶ್ರೀಲಂಕಾದ ಗಾಲೆ ಮೈದಾನದ ಅಂಕಣವನ್ನು ಬದಲಾಯಿಸಲು ಮೈದಾನ ಸಿಬಂದಿಗೇ ಫಿಕ್ಸರ್‌ಗಳು ಹಣ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಅಲ್‌ಜಜೀರಾ ಸುದ್ದಿವಾಹಿನಿ ಮಾಡಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಮಾಹಿತಿ ಬಯಲಾಗಿದ್ದು, ಐಸಿಸಿ ತನಿಖೆ ಆರಂಭಿಸಿದೆ. ಪರಿಣಾಮ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮುಂದಿನ ಶ್ರೀಲಂಕಾ ಪ್ರವಾಸ ಅತಂತ್ರಗೊಂಡಿದೆ.

Advertisement

ಗಾಲೆಯಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್‌ ನಡುವೆ ನಡೆಯಬೇಕಿರುವ ಟೆಸ್ಟ್‌ ಪಂದ್ಯದ ಫ‌ಲಿತಾಂಶ ಬದಲಾಯಿಸಲು ಅಂಕಣವನ್ನೇ ಬದಲಾಯಿಸಲು ಸಿಬಂದಿಗೆ ಹಣ ನೀಡಲಾಗಿದೆ ಎನ್ನುವುದು ಆರೋಪ. ಈ ಹಿಂದೆ ಆಸ್ಟ್ರೇಲಿಯ ಮತ್ತು ಭಾರತ ತಂಡಗಳು ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಪಂದ್ಯವಾಡಿದ್ದಾಗಲೂ ಅಂಕಣವನ್ನು ಬದಲಾಯಿಸಲಾಗಿದೆ ಎಂದು ಆಸ್ಟ್ರೇಲಿಯ ಪತ್ರಿಕೆಯೊಂದು ಆರೋಪ ಮಾಡಿತ್ತು. ಆದ್ದರಿಂದ ಐಸಿಸಿ ಇಡೀ ವಿಶ್ವದ ಕ್ರಿಕೆಟ್‌ ಮಂಡಳಿಗಳಿಗೆ ಪತ್ರ ಬರೆದು ಮಾಹಿತಿ ಕೊಡುವಂತೆ ಆಗ್ರಹಿಸಿದೆ. ಅಲ್ಲದೇ ತನಿಖೆ ನಡೆಸುವಂತೆ ತಿಳಿಸಿದೆ.

ಐಸಿಸಿ ಏನು ಹೇಳುವುದೇನು?
ಘಟನೆಯ ಸಂಬಂಧ ಐಸಿಸಿ ಪ್ರತಿಕ್ರಿಯೆ ನೀಡಿದೆ. “ನಾವು ಈಗಾಗಲೇ ತನಿಖೆ ಆರಂಭಿಸಿದ್ದೇವೆ. ಸದ್ಯ ನಮಗಿರುವ ಅತ್ಯಲ್ಪ ಮಾಹಿತಿಯಲ್ಲೇ ತನಿಖೆ ಮುಂದುವರಿದಿದೆ. ಮೋಸದಾಟಕ್ಕೆ ಸಂಬಂಧಪಟ್ಟಂತೆ ಇರುವ ಪೂರ್ಣ ದಾಖಲೆಗಳನ್ನು ನೀಡಿ ಎಂದು ನಾವು ಪದೇ ಪದೇ ವಿನಂತಿ ಮಾಡಿದ್ದೇವೆ. ಪೂರ್ಣ ಸಾಕ್ಷಿಗಳಿಂದ ತನಿಖೆಯನ್ನು ಸಮಗ್ರವಾಗಿ ನಡೆಸಬಹುದು’ ಎಂದು ಐಸಿಸಿ ಹೇಳಿದೆ.

ಪುಣೆ ನೆನಪು ಮಾಸುವ ಮುನ್ನ ಮತ್ತೆ ಹಗರಣ
ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವೆ 2ನೇ ಏಕದಿನ ಪಂದ್ಯ ಪುಣೆ ಅಂಕಣದಲ್ಲಿ ನಿಗದಿಯಾಗಿತ್ತು. ಅದರ ಹಿಂದಿನ ದಿನ ಅಲ್ಲಿನ ಕ್ಯುರೇಟರ್‌ ಅಂಕಣ ಬದಲಾಯಿಸಲು ಒಪ್ಪಿಕೊಂಡ ಕುರಿತು ಇಂಡಿಯಾ ಟುಡೇ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಪಂದ್ಯದ ಹಿಂದಿನ ದಿನವೇ ಕ್ಯುರೇಟರ್‌ ಪಾಂಡುರಂಗ ಸಲ್ಗಾಂವ್ಕರ್‌ ಅಂಕಣವನ್ನು ಬೌನ್ಸ್‌ಗೆ ನೆರವಾಗುವಂತೆ ಬದಲಾಯಿಸುತ್ತೇನೆಂದು ಹೇಳಿಕೊಂಡಿದ್ದರು. 

ಅಷ್ಟುಮಾತ್ರವಲ್ಲ ವರದಿಗಾರರನ್ನು ನಿಯಮಬಾಹಿರವಾಗಿ ಅಂಕಣದೊಳಗೆ ಕರೆದೊಯ್ದಿದ್ದರು. ಆದರೆ ತನಿಖೆಯ ಬಳಿಕೆ ಅಂಕಣ ಬದಲಾಗಿಲ್ಲ ಎಂದು ಗೊತ್ತಾಗಿತ್ತು. ಆದ್ದರಿಂದ ಮರುದಿನ ಪಂದ್ಯ ಅಲ್ಲೇ ನಡೆಯಿತು. ಅದರ ನೆನಪು ಮಾಸುವ ಮುನ್ನವೇ ಈಗ ಶ್ರೀಲಂಕಾ ಮೈದಾನದ ಗಲಾಟೆ ಮೇಲೆದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next