ಶಿವಮೊಗ್ಗ: ಹಿಂದೂಗಳ ದೇವಾಲಯ ಒಡೆದು ಮಸೀದಿ ಕಟ್ಟಿದ್ದಾರೆಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ತಪ್ಪಲ್ಲ. ಈ ಹೇಳಿಕೆಯನ್ನು ಹಿಂದೂ ಸ್ವಾಗತ ಮಾಡಬೇಕು. ನಮ್ಮ ಸಂಸ್ಕೃತಿ ಉಳಿಯಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ನಡೆದಿವೆ. ಎಲ್ಲಾ ಹೇಳಿಕೆಯನ್ನ ಸ್ವಾಗತ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹೇಳಿರುವುದು ಶ್ರೀರಂಗಪಟ್ಟಣ ಕಾರವಾರ ಜಿಲ್ಲೆಯಲ್ಲಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆಂದು. ಇದು ತಪ್ಪಲ್ಲ. ದೇವಸ್ಥಾನ ಒಡೆದು ಒಡೆದು ಮಸೀದಿ ಕಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ತಿದ್ದಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಾರೆ, ಇದು ಯಾವ ನ್ಯಾಯ? ಅಯೋಧ್ಯೆ ರಾಮ ಮಂದಿರಕ್ಕೆ ಹೋಗುವುದಿಲ್ಲ ಎಂದಿದ್ದರು, ಜ.22 ರ ನಂತರ ಹೋಗುತ್ತೇನೆಂದರು, ಸಿದ್ದರಾಮಯ್ಯ, ಖರ್ಗೆ ಅವರಿಗೆ ನಾನು ಸ್ವಾಗತ ಕೋರಿದ್ದೆ ಆದರೆ ಸಿದ್ದರಾಮಯ್ಯ ಮತ್ತೆ ನಾನು ರಾಮ ಮಂದಿರಕ್ಕೆ ಹೋಗುವುದಿಲ್ಲ, ಹೋಗುತ್ತೇನೆಂದು ಹೇಳಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ನಿಮಿಷಕ್ಕೊಂದು ಮಾತನಾಡುತ್ತಾರೆ ಎಂದು ಛೇಡಿಸಿದರು.
ಪಾಪ ಕಳೆದು ಬನ್ನಿ: ನಿಮ್ಮ ಹೆಸರಿನಲ್ಲಿ ಸಿದ್ದ – ರಾಮ ಎರಡೂ ಇದೆ. ರಾಮ ಮಂದಿರಕ್ಕೆ ಹೋಗಿ ನಿಮ್ಮ ಪಾಪ ಕಳೆದುಕೊಂಡು ಬನ್ನಿ. ನೀವು ಏಕೆ ಬಿಜೆಪಿ ರಾಮ ಮಂದಿರ ಎಂದು ಭಾವಿಸುತ್ತೀರಿ. ನಾವು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಶ್ರೀರಾಮ ಇರುವುದು ಇಡೀ ಪ್ರಪಂಚದ ಹಿಂದೂಗಳನ್ನು ಒಂದು ಮಾಡಲು. ಯಾವ ರೀತಿ ರಾಜಕಾರಣ ಮಾಡುತ್ತಿದ್ದೇವೆಂದು ನೀವು ಹೇಳಿದರೆ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇವೆಂದು ಈಶ್ವರಪ್ಪ ಹೇಳಿದರು.
ಬೆಳಗಾವಿಯಲ್ಲಿ ಗೂಂಡಾ ಮುಸ್ಲಿಮರು ಹಲ್ಲೆ ಮಾಡಿದ್ದಾರೆ. ಅಣ್ಣ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ. ಮೃಗೀಯ ರೀತಿಯ ಘಟನೆಗಳು ನಡೆಯುತ್ತಿವೆ ಎಂದರು.