ಬೆಂಗಳೂರು: ಮುಂಗಡ ಹಣ ಹಿಂದಿರುಗಿಸದ ಟ್ಯುಟೋರಿಯಲ್ ಮಾಲೀಕನನ್ನು ಸೀಮೆಎಣ್ಣೆ ಸುರಿದುಕೊಂಡು ಹೆದರಿಸಲು ಮುಂದಾದ ಟೆಕ್ಕಿಯೊಬ್ಬರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಎಚ್‌ಎಎಲ್ ನಿವಾಸಿ ರಿತೇಶ್ ಕುಮಾರ್ (36) ಮೃತಪಟ್ಟ ಟೆಕ್ಕಿ. ಇದೇ ವೇಳೆ ಟ್ಯುಟೋರಿಯಲ್ ಮಾಲೀಕ ಆದಿತ್ಯ ಬಜಾಜ್ ಅವರಿಗೂ ಬೆಂಕಿ ತಗುಲಿದ್ದು, ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ.29ರಂದು ಜೆ.ಪಿ.ನಗರದ 2ನೇ ಹಂತದಲ್ಲಿರುವ ಆದಿತ್ಯ ಟ್ಯುಟೋರಿಯಲ್ಸ್ ಬಳಿ ನ.29ರಂದು ಘಟನೆ ನಡೆದಿದೆ.
ಪಾಟ್ನಾ ಮೂಲದ ರಿತೇಶ್ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಖಾಸಗಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಪುತ್ರನನ್ನು ಜೆ.ಪಿ.ನಗರದಲ್ಲಿರುವ ಆದಿತ್ಯ ಟ್ಯುಟೋರಿಯಲ್‌ಗೆ ಸೇರಿಸಿದ್ದರು. ಪುತ್ರನ ಒಂದು ವರ್ಷದ ವ್ಯಾಸಂಗ ಶುಲ್ಕವನ್ನು ಮುಂಗಡವಾಗಿ 2.5 ಲಕ್ಷ ರೂ.ಗಳನ್ನು ಟ್ಯುಟೋರಿಯಲ್ ಮಾಲೀಕ ಆದಿತ್ಯಗೆ ನೀಡಿದ್ದರು.
ಆದರೆ, ಪುತ್ರ ಶಾಲೆಯಲ್ಲಿ ನಿರೀಕ್ಷೆಯಂತೆ ಅಂಕ ಗಳಿಸಲಿಲ್ಲ ಎಂಬ ಕಾರಣಕ್ಕೆ ಪುತ್ರನನ್ನು ಟ್ಯುಟೋರಿಯಲ್ಸ್‌ನಿಂದ ಬಿಡಿಸಿ ಬೇರೆಡೆ ಸೇರಿಸಿದ್ದರು. ಈ ಹಿನ್ನೆಲೆಯಲ್ಲಿ ಆದಿತ್ಯ 2.5 ಲಕ್ಷ ಪೈಕಿ 1.25 ಲಕ್ಷ ರೂ. ಅನ್ನು ನ.25ರಂದು ವಾಪಸ್ ನೀಡಿದ್ದರು. ಇನ್ನುಳಿದ 1.75 ಲಕ್ಷವನ್ನು ಹಿಂದಿರುಗಿಸಿರಲಿಲ್ಲ. ಇದೇ ವಿಚಾರವಾಗಿ ಆದಿತ್ಯ ಮತ್ತು ರಿತೇಶ್ ನಡುವೆ ಜಗಳವಾಗಿತ್ತು.
ಆಕಸ್ಮಿಕವಾಗಿ ತಗುಲಿದ ಬೆಂಕಿ: ಈ ಮಧ್ಯೆ ನ.29ರಂದು ಜೆ.ಪಿ.ನಗರದಲ್ಲಿರುವ ಟ್ಯುಟೋರಿಯಲ್‌ಗೆ ಸೀಮೆಎಣ್ಣೆ ಕ್ಯಾನ್ ಸಮೇತ ಬಂದ ಟೆಕ್ಕಿ ರಿತೀಶ್ ಆದಿತ್ಯಗೆ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದು, ಇಬ್ಬರ ನಡುವೆ ಗಲಾಟೆಯಾಗಿದೆ. ಹಣ ನೀಡಲು ಆದಿತ್ಯ ಒಪ್ಪದಿದ್ದಾಗ ತಾವು ತಂದಿದ್ದ ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಆಕಸ್ಮಿಕವಾಗಿ ಬೆಂಕಿಯ ಕಿಡಿ ರಿತೇಶ್ ಬಟ್ಟೆ ಮೇಲೆ ಬಿದ್ದು, ಇಡೀ ದೇಹಕ್ಕೆ ಬೆಂಕಿಯ ಆವರಿಸಿ ಶೇ.70ರಷ್ಟು ಸುಟ್ಟ ಗಾಯಗಳಾದವು. ರಕ್ಷಿಸಲು ಹೋದ ಆದಿತ್ಯಗೂ ಬೆಂಕಿ ತಗುಲಿದೆ. ಬಳಿಕ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿ.1ರಂದು ಚಿಕಿತ್ಸೆ ಫಲಕಾರಿಯಾಗದೆ ರಿತೇಶ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.