ನಾವು ವೈಫಲ್ಯವನ್ನು ದುರದೃಷ್ಟವೆಂದು, ಸಾಫಲ್ಯವನ್ನು ಅದೃಷ್ಟವೆಂದು ನಂಬುತ್ತವೆ. ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿರುತ್ತದೆ. ಸ್ವ ಪ್ರಯತ್ನದ ಮೇಲೆ ನಂಬಿಕೆ ಇಟ್ಟು ಕಾರ್ಯ ಪ್ರವೃತ್ತ ರಾಗುವವರು ಅದೃಷ್ಟದ ಬಗ್ಗೆ ಎಂದಿಗೂ ಆಲೋಚಿಸಲಾರರು. ಪರಿಶ್ರಮದಿಂದ ಕೃಷಿಯನ್ನು ಮಾಡದೇ, ಬೆಳೆಯನ್ನು ಬೆಳೆ ಯದೇ ಇದ್ದರೆ, ಅದರಿಂದ ದುರ್ಭಿಕ್ಷ ಹೊಂದಿದರೆ ಅಲ್ಲಿ ಅದೃಷ್ಟಕ್ಕೆಲ್ಲಿದೆ ಸ್ಥಾನ!.
ನಿರಾಶೆ, ಕೀಳರಿಮೆಯಿಂದ ಕಳವಳ ಪಡುತ್ತಿರುವವರು ಮಾತ್ರವಷ್ಟೇ “ಅದೃಷ್ಟ ವಿಲ್ಲ’ ಎಂದೋ “ದುರದೃಷ್ಟ’ ನನ್ನನ್ನು ಕಾಡು ತ್ತಿದೆ ಎಂದು ತಿಳಿಯುತ್ತಾರೆ. ನಮ್ಮ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅತ್ಯಂತ ಸಾಮಾನ್ಯ ಕಡು ಬಡತನದ ಕುಟುಂಬಕ್ಕೆ ಸೇರಿದ ವ್ಯಕ್ತಿ. ಸಂಕಲ್ಪ ಬಲ, ಸ್ವಯಂ ಕೃಷಿ, ಆತ್ಮವಿಶ್ವಾಸವೇ ಅವರನ್ನು ಅತ್ಯುನ್ನತ ಸ್ಥಾನಕ್ಕೆ ಕರೆದೊಯ್ದವು. ಅವರ ವೈಯಕ್ತಿಕ ಸಂಸ್ಕಾರ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತು. ವಿದ್ಯಾರ್ಥಿಗಳು, ಸಾಧಕರಿಗೆ ಸಾಮಾನ್ಯ ಜನರ ಬದುಕಿಗೆ ಕಲಾಂರ ಮಹಾನ್ ವ್ಯಕ್ತಿತ್ವ, ನೇರವಾದ ಆದರ್ಶ, ನಲ್ಮೆಯ ನಾಳೆಗಳ ಕುರಿತಾದ ಅವರಿಗಿದ್ದ ಶ್ರದ್ಧೆ, ಅವಿಶ್ರಾಂತ ದುಡಿಮೆ ದಾರಿದೀಪವಾಗಿದೆ.
ವೈಫಲ್ಯವನ್ನು ಮೆಟ್ಟಿನಿಂತು ಸಾಫ ಲ್ಯದ ಶಿಖರವನ್ನು ಏರಲು ನಾವು ಸೂಕ್ತ ವಾದ ಮಾರ್ಗವನ್ನು ಹುಡುಕುವ ಕೆಲಸ ಮೊದಲು ಮಾಡಬೇಕಿದೆ. ಫಲ ಪ್ರದವಾದ ಫಲಿತಾಂಶ ಪಡೆಯುವ ತನಕ ವೈಫಲ್ಯಗಳಿಗೆ ಹೆದರಿ ಹಿಂದೆ ಸರಿಯ ಲೇಬಾರದು.
ಸಾಧಿಸಿದ ಬಳಿಕವೂ ಸಹ ಕೃಷಿಯನ್ನು ನಿಲ್ಲಿಸಬಾರದು. ಜ್ಞಾನವೆನ್ನುವ ಸಮುದ್ರವನ್ನು ಜಿಜ್ಞಾಸೆ ಎನ್ನುವ ಸಾಧನೆ ಯಿಂದ ಆಸ್ವಾದಿಸುತ್ತಿರಬೇಕು. ಆಗ ಜ್ಞಾನದ ನೈಜ ಮತ್ತು ಅದ್ಭುತ ಅನುಭವ ಉಂಟಾಗುತ್ತದೆ. ತಪಸ್ಸು ಎಂದರೆ ಒಂದು ಹೊತ್ತಿಗೆ ಮುಗಿಸುವಂತಹ ಪೂಜೆ ಯಾಗದು. ಅದೇ ರೀತಿ ಓದೆಂದರೆ ಪದವಿಗಾಗಿ, ಉದ್ಯೋಗಕ್ಕಾಗಿ ಓದಿ ಮುಗಿಸುವಂಥದ್ದಲ್ಲ. ವ್ಯಕ್ತಿಯೋರ್ವ ನಿತ್ಯ ವಿದ್ಯಾರ್ಥಿಯಾಗಿರಬೇಕು. ಆಗಷ್ಟೇ ಜ್ಞಾನಸಾರ ಚಂದ್ರ – ಸೂರ್ಯ ಕಿರಣ ಗಳಂತೆ, ಪ್ರಾಣವಾಯು ನೀಡುವಂತಹ ಪವನದಂತೆ ಹರಡುತ್ತದೆ. ಮನಸ್ಸು, ಬುದ್ಧಿ, ಆತ್ಮವನ್ನು ಶಕ್ತಿಯುತಗೊಳಿಸುತ್ತವೆ. ವಿಶಿಷ್ಟ ವ್ಯಕ್ತಿತ್ವ, ಜ್ಞಾನತೇಜ ನಮ್ಮನ್ನು ಆವರಿಸಿರುತ್ತದೆ. ಪ್ರತಿಯೊಂದು ವೈಫಲ್ಯ ವನ್ನು ವಿಶ್ಲೇಷಿಸಿ ನೋಡಿದರೆ ನಮ್ಮ ಲೋಪ ಗಳೆಲ್ಲವನ್ನು ಎತ್ತಿ ತೋರಿಸುತ್ತದೆ. ಅದರ ಬಗ್ಗೆ ತಿಳಿದು ಸರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ:ಭಾರತದತ್ತ ಬಂದಿದ್ದ ಪಾಕ್ ದೋಣಿ ವಶ; 10 ಜನರ ಬಂಧನ
ಆ ರೀತಿ ಮಾಡಲು ಸಹನೆ, ತಾಳ್ಮೆ, ಹಿಡಿತ, ಮನೋಬಲ, ಆತ್ಮವಿಶ್ವಾಸ ಜತೆಯಾಗಿರಬೇಕು. ಸಾಧನೆ ಎಂದರೆ ಸಾಧಿಸುವುದಕ್ಕಾಗಿ ಮಾಡುವ ಕೃಷಿ. ವೈಫಲ್ಯಕ್ಕೆ ಕಿರಿಕಿರಿ ಗೊಂಡು ದೂರ ಸರಿಯುವುದಲ್ಲ. ಓದು, ಬುದ್ದಿವಂತಿಕೆ, ಪ್ರಜ್ಞೆ, ವ್ಯಕ್ತಿತ್ವ ಏಕೀ ಕೃತಗೊಂಡು ಅದರಿಂದ ಸಾಧನೆ ಯನ್ನು ನಮ್ಮದಾಗಿಸಿಕೊಳ್ಳಬಹುದು. ಪ್ರತಿಯೊಬ್ಬ ಮನುಷ್ಯ ಒಂದು ಬೀಜದಂತೆ. ಅವಕಾಶಗಳು ಗಾಳಿ ನೀರಿನಂತವು. ಅವನ್ನು ಪಡೆದುಕೊಂಡು ಚುರುಕಾಗಿ, ಶಕ್ತಿಯುತವಾಗಿ ಬೆಳೆಯಬೇಕು. ಆಗ ಬದುಕು ಅರ್ಥಭರಿತವಾಗುತ್ತದೆ. ಪ್ರತಿ ಯೊಂದು ಸಾಫಲ್ಯದ ಹಿಂದೆ ತಪಸ್ಸು, ಹಿಡಿತ, ಅವಿಶ್ರಾಂತ ಕೃಷಿ ಇರುತ್ತವೆ. ಯಾವುದೇ ಕ್ಷೇತ್ರವಿರಲಿ ವೈಫಲ್ಯವನ್ನು ಸಾಫಲ್ಯವಾಗಿಸಿಕೊಂಡಲ್ಲಿ ಅದ್ಭುತ ಅವಕಾಶಗಳು ಹುಡುಕಿಕೊಂಡು ಬರು ತ್ತವೆ. ಕಾಲದೊಂದಿಗೆ ಅವಕಾಶಗಳು ಕೂಡ ಬಂದು ಹೋಗುತ್ತಿರುತ್ತವೆ.
ಮುಂಜಾನೆ ವೇಳೆಯಲ್ಲಿ ಅರಳಿ ಕಂಗೊಳಿಸುವ ಪರಿಪರಿಯ ಪರಿಮಳವನ್ನು ಹೊರಸು ಸುವ ಪುಷ್ಪಗಳನ್ನು ರಾತ್ರಿ ಪಡೆಯೋಣ ಎಂದುಕೊಂಡರೆ ಅವು ಬಾಡಿ, ಉದುರಿ ಹೋಗುತ್ತವೆ. ಈ ಸತ್ಯವನ್ನು ಪ್ರತಿ ಯೋರ್ವ ವ್ಯಕ್ತಿ ಅನುಕ್ಷಣವೂ ನೆನಪಿಸಿ ಕೊಳ್ಳಬೇಕು. ಯಾವುದೇ ಕ್ಷಣವನ್ನು ವ್ಯರ್ಥ ಮಾಡಬಾರದು.
ಹಣ ಹೋದರೆ ಪುನಃ ಸಂಪಾದಿಸ ಬಹುದು. ಆದರೆ ಕಾಲವನ್ನಲ್ಲ. ವೈಫಲ್ಯಕ್ಕೆ ಕುಗ್ಗದೆ, ನಿದ್ರಾವಸ್ಥೆಯಲ್ಲಿರುವ ಅದ್ಭುತ ಶಕ್ತಿಗಳನ್ನು ಜಾಗೃತಿ ಮಾಡುವುದೇ ವಿಜಯ ರಹಸ್ಯ. ವೈಫಲ್ಯಗಳನ್ನು ಸಾಫಲ್ಯ ವನ್ನಾಗಿಸಿಕೊಂಡರೆ ಸಾಧನೆಯ ಸಿದ್ಧಿ ಬಲುಸುಲಭ. ನಡೆಯುವ ಮಾರ್ಗದಲ್ಲಿ ಕಲ್ಲು ಮುಳ್ಳುಗಳು ಇರುವುದು ಸಹಜ. ಹಾಗೆಂದು ಪಯಣವನ್ನು ನಿಲ್ಲಿಸಿ ಸುಮ್ಮನೆ ಕುಳಿತುಕೊಳ್ಳುವುದಲ್ಲ. ಕಲ್ಲು ಮುಳ್ಳುಗಳೆಂಬ ವೈಫಲ್ಯವನ್ನು ತೊಡೆದು ಹಾಕಿ, ಸಾಫಲ್ಯವೆಂಬ ಸಾಮ್ರಾಜ್ಯದ ಸಾಮ್ರಾಟನಾಗುವುದು ವೈಫಲ್ಯದಿಂದ ಸಾಫಲ್ಯದೆಡೆಗೆ ಸಾಗಿದಾಗ ಮಾತ್ರ.
-ರಾಘವೇಂದ್ರ ದುರ್ಗ, ಶಿರೂರು