ಕಲಬುರಗಿ: ಮಕ್ಕಳು ನೀರಿನ ಮಹತ್ವ ಅರಿತು ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪ್ರೊ| ವಸಂತ ಕುಷ್ಟಗಿ ಹೇಳಿದರು. ಇನ್‌ಟ್ಯಾಕ್ ಅಧ್ಯಯನ ಮತ್ತು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ‘ನನ್ನ ನೀರಿನ ಪರಂಪರೆ’ ಎನ್ನುವ ವಿಷಯ ಕುರಿತು ರೋಟರಿ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ನೀರಿಗಾಗಿ ಅನೇಕ ಕಡೆಗಳಲ್ಲಿ ಹಾಹಾಕಾರವಿದೆ. ಕೆಲವೆಡೆ ಇದಕ್ಕಾಗಿಯೇ ಕಾದಾಟಗಳಾಗಿವೆ. ಮುಂದೊಂದು ದಿನ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬರಬಹುದು. ಹೀಗಾಗಿ ನೀರನ್ನು ಸಂರಕ್ಷಿಸಿ ಎಂದರು.
ಇನ್‌ಟ್ಯಾಕ್ ಸಂಚಾಲಕ ಡಾ| ಶಂಭುಲಿಂಗ ಎಸ್. ವಾಣಿ ಮಾತನಾಡಿ, ಈ ಸ್ಪರ್ಧೆ ದೇಶದ 196 ಇನ್‌ಟ್ಯಾಕ್ ಅಧ್ಯಯನಗಳಲ್ಲಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ 100 ಟ್ರೋಫಿಗಳನ್ನು, ರಾಷ್ಟ್ರಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗುಜರಾತ ರಾಜ್ಯದ ಉಚಿತ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗುವುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ನೀನಾರಾಯಣ ಮಾತನಾಡಿ, ನೀರು ಇದ್ದರೆ ನೆಲ, ನೆಲವಿದ್ದರೆ ನಾವು-ನಿವೆಲ್ಲ, ನೀರಿಲ್ಲದಿದ್ದರೆ ಜಗತ್ತೇ ಶೂನ್ಯ ಎಂದರು.
ಇನ್‌ಟ್ಯಾಕ್ ಅಧ್ಯಕ್ಷ ಡಾ| ಬಿ.ಎಸ್.ಗುಲಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಯಕ್ಕಳ್ಳಿ, ಕಾರ್ಯದರ್ಶಿ ಬಿ. ಶ್ರೀನಿವಾಸರಾವ್ ಮಾತನಾಡಿದರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ರಮೇಶ ಪಾಟೀಲ, ವಿದ್ಯಾಸಾಗರ, ಸಂಧ್ಯಾರಾಜ ಹಾಗೂ ಇನ್‌ಟ್ಯಾಕ್ ಪದಾಧಿಕಾರಿಗಳಾದ ಡಾ| ನಬಿಸಾ, ಡಾ| ಶ್ರೀನಾಥ, ಪ್ರೊ| ರಾಘವೇಂದ್ರ, ಡಾ| ರವಿಕುಮಾರ ಮುಂತಾದವರು ಇದ್ದರು.