Advertisement

ಐಐಟಿ ಕಾಯಂ ಕ್ಯಾಂಪಸ್‌ ನಿರ್ಮಾಣಕ್ಕೆ ಜಾಗತಿಕ ಟೆಂಡರ್‌

07:35 AM Jul 28, 2017 | Team Udayavani |

ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆಗಸ್ಟ್‌ 1ಕ್ಕೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ 2ನೇ ವರ್ಷಕ್ಕೆ ಕಾಲಿರಿಸಲಿದೆ. ಇದರ ಕಾಯಂ ಕ್ಯಾಂಪಸ್‌ ನಿರ್ಮಾಣಕ್ಕೆ ವಿಶ್ವಮಟ್ಟದಲ್ಲಿ ಟೆಂಡರ್‌ (ಗ್ಲೋಬಲ್‌ ಟೆಂಡರ್‌) ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಸದ್ಯಕ್ಕೆವಾಲಿ¾ ಕಟ್ಟಡದಲ್ಲಿಐಐಟಿ ನಡೆಯುತ್ತಿ ದ್ದರೂ, ಕಾಯಂ ಕ್ಯಾಂಪಸ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಕ್ಕಮಲ್ಲಿಗವಾಡ ಬಳಿ 470 ಎಕರೆ ಜಾಗ ನೀಡಿದೆ.

ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ 1,440 ಕೋಟಿ ರೂ.ಗಳನ್ನು ಧಾರವಾಡ ಐಐಟಿ ಕ್ಯಾಂಪಸ್‌ ನಿರ್ಮಾಣಕ್ಕೆ ಕಾಯ್ದಿರಿಸಿದೆ. ಸದ್ಯಕ್ಕೆ ಭೂ ಸರ್ವೇ ಮುಗಿದಿದ್ದು, ಕಾಂಪೌಂಡ್‌ ಗೋಡೆ ನಿರ್ಮಾಣಸಾಗಿದ್ದು, ಕ್ರಿಯಾ ಯೋಜನೆ ಮತ್ತು ಅದರ ವೆಚ್ಚ ಕುರಿತು ಧಾರವಾಡ ಜಿಲ್ಲಾಡಳಿತ ಮೂಲಕ ಮುಂಬೈ ಐಐಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕಾಂಪೌಂಡ್‌ ನಿರ್ಮಿಸುವುದಕ್ಕೆ ಸೀಮಿತ.

ವಿಶ್ವದರ್ಜೆ ಕಟ್ಟಡ: ಕಾಯಂ ಕ್ಯಾಂಪಸ್‌ನಲ್ಲಿ ತಲೆ ಎತ್ತಲಿರುವ ಬಹುಮಹಡಿ ಕಟ್ಟಡಗಳು, ಕ್ರೀಡಾಂಗಣ, ವಿದ್ಯಾರ್ಥಿ ನಿಲಯಗಳು, ಪ್ರಾಧ್ಯಾಪಕರ ಕೊಠಡಿಗಳು, ತೋಟ ನಿರ್ಮಾಣ ಸೇರಿ ಪ್ರತಿಯೊಂದನ್ನೂ ವಿಶ್ವದರ್ಜೆಯ ಹೈಟೆಕ್‌ ಮಟ್ಟದಲ್ಲಿ ನಿರ್ಮಿಸಬೇಕಿದೆ. ಆದ್ದರಿಂದ ವಿಶ್ವಮಟ್ಟದ ಕಟ್ಟಡ ನಿರ್ಮಾಣ ಸಂಸ್ಥೆಗೆ ಟೆಂಡರ್‌ ನೀಡಲು ಮುಂಬೈ ಐಐಟಿ ಮತ್ತು ಕೇಂದ್ರ ಸರ್ಕಾರ ನಿರ್ಧರಿಸಿವೆ.

ಐಐಟಿಗೆ 2017-18ನೇ ಸಾಲಿಗೆ 120 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ವಿಜ್ಞಾನ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈ ಐಐಟಿಯ ಹಿರಿಯ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಬೋಧಿಸಲಿದ್ದಾರೆ. ಈ ವರ್ಷವೂ ತಾತ್ಕಾಲಿಕ ಕಟ್ಟಡದಲ್ಲೇ ಐಐಟಿ ಕಾರ್ಯ ನಿರ್ವಹಿಸಲಿದೆ.

Advertisement

ಇಲ್ಲಿನ ಹೈಕೋರ್ಟ್‌ ಪಕ್ಕದಲ್ಲಿರುವ ನೆಲ ಜಲ ಸಂರಕ್ಷಣಾ ಸಂಸ್ಥೆ ವಾಲಿ¾ ಕಟ್ಟಡದಲ್ಲೇ 2ನೇ ವರ್ಷದ ಐಐಟಿ ತರಗತಿಗಳು ಆರಂಭಗೊಳ್ಳಲಿವೆ. ರಾಜ್ಯ ಸರ್ಕಾರ ಕಳೆದ ವರ್ಷದ ಐಐಟಿ ತಾತ್ಕಾಲಿಕ ಕ್ಯಾಂಪಸ್‌ಗೆ 14 ಕೋಟಿ ರೂ.ಗಳಿಗೂ ಅಧಿಕ ಹಣ ವ್ಯಯಿಸಿತ್ತು. ಈ ವರ್ಷ ಮತ್ತೆ ಹೆಚ್ಚುವರಿಯಾಗಿ 9.23 ಕೋಟಿ ರೂ. ನೀಡಿದೆ. ಜಿಲ್ಲಾಡಳಿತ ಈ ಹಣದಲ್ಲಿ ಬೋಧನಾ ಕೊಠಡಿ, ಪ್ರಯೋಗಾಲಯ, ವಿದ್ಯಾರ್ಥಿಗಳ ಹಾಸ್ಟೆಲ್‌ ಸೇರಿ ಮೂಲಸೌಕರ್ಯ ಕಲ್ಪಿಸಿದೆ. ಆಗಸ್ಟ್‌ 1ರಿಂದಲೇ 2ನೇ ವರ್ಷದ ಐಐಟಿ ಕ್ಲಾಸ್‌ಗಳು ಮತ್ತೆ ಆರಂಭಗೊಳ್ಳಲಿವೆ.

ಕನ್ನಡಿಗರಿಗೆ ಶೇ.25 ಮೀಸಲಾತಿ ಇಲ್ಲ
ಐಐಟಿಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಭೂಮಿ, ನೀರು, ವಿದ್ಯುತ್‌ ಮತ್ತು ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರ ನೀಡುತ್ತದೆ. ಹೀಗಾಗಿ ಈ ಮಣ್ಣಿನ ಮಕ್ಕಳಿಗೂ ಇಲ್ಲಿ ಶೇ.25 ಸೀಟುಗಳನ್ನು ಮೀಸಲಿಡಬೇಕೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕಳೆದ ವರ್ಷವೇ ಕೇಂದ್ರ ಸರ್ಕಾರಕ್ಕೆ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಕೇಂದ್ರ ಸರ್ಕಾರ ಮನವಿಯನ್ನು ತಿರಸ್ಕರಿಸಿತ್ತು. ಈ ಸಂಬಂಧ ರಾಜ್ಯ ಮತ್ತು ಕೇಂದ್ರಗಳು ಮತ್ತೆ ಯಾವುದೇ ಚರ್ಚೆ ಮಾಡಿಲ್ಲ. ಹೀಗಾಗಿ ಕನ್ನಡ ಮಕ್ಕಳಿಗೆ ಶೇ.25 ಮೀಸಲಾತಿ ಸದ್ಯಕ್ಕಿಲ್ಲ.

ಜಿಲ್ಲಾಡಳಿತ ವಾಲಿ¾ಕಟ್ಟಡದಲ್ಲೇ ಐಐಟಿ 2ನೇ ವರ್ಷದ ತರಗತಿ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿದೆ. ಕಾಯಂ ಕ್ಯಾಂಪಸ್‌ ನಿರ್ಮಾಣಕ್ಕೆ ವಿಶ್ವಮಟ್ಟದಲ್ಲಿ ಟೆಂಡರ್‌ ಕರೆಯಲು ಮುಂಬೈ ಐಐಟಿ ನಿರ್ಧರಿಸಿದೆ ಎಂದು ಗೊತ್ತಾಗಿದೆ. ಇನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25 ಸೀಟುಗಳ ಮೀಸಲು ಬಗ್ಗೆ ಏನಾಗಿದೆ ಗೊತ್ತಿಲ್ಲ.
– ಡಾ.ಎಸ್‌.ಬಿ.ಬೊಮ್ಮನಹಳ್ಳಿ,
ಧಾರವಾಡ ಜಿಲ್ಲಾಧಿಕಾರಿ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next