ನವದೆಹಲಿ: ಜಗತ್ತಿನಾದ್ಯಂತ ಕೋವಿಡ್ 19 ಸೋಂಕಿತರ ಸಂಖ್ಯೆ 10 ಮಿಲಿಯನ್ ಗಡಿ ದಾಟಿದ್ದು 7 ತಿಂಗಳಲ್ಲಿ 5 ಲಕ್ಷ ಕಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಈ ಸಾಂಕ್ರಮಿಕ ರೋಗದ ತೀವ್ರತೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ವೈರಸ್ ಗೆ ಲಸಿಕೆ ಲಭ್ಯವಾಗುವರೆಗೂ ಸಾಮಾಜಿಕವಾಗಿ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತರುವ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಅನೇಕ ದೇಶಗಳಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಲು ಚಿಂತನೆ ನಡೆಸುತ್ತಿವೆ. ತಜ್ಞರ ಪ್ರಕಾರ ಈ ಸೋಂಕು 2021ರವರೆಗೂ ತನ್ನ ಅಟ್ಟಹಾಸ ಬಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಉತ್ತರ ಅಮೆರಿಕಾ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ತಲಾ 25% ಪ್ರಕರಣಗಳಿದ್ದರೆ, ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶದಲ್ಲಿ ಕ್ರಮವಾಗಿ 11% ಮತ್ತು 9% .ಸೋಂಕಿತ ಪ್ರಕರಣಗಳನ್ನು ಹೊಂದಿವೆ ಎಂದು ರಾಯಿಟರ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಸೊಂಕಿತರ ಸಂಖ್ಯೆ 1 ಕೋಟಿ ಗಡಿ ದಾಟುವುದರೊಂದಿಗೆ ಜಗತ್ತಿನಾದ್ಯಂತ 5 ಲಕ್ಷಕ್ಕಿಂತ ಹೆಚ್ಚು ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಕೋವಿಡ 19 ಸೋಂಕು 2019ರ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿತ್ತು. ಇದು ಜನವರಿ 10 2020 ರಂದು ದೃಢವಾಗುವುದರೊಂದಿಗೆ ಅಮೆರಿಕಾ, ರಷ್ಯಾ ಮುಂತಾದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿ ಹಲವಾರು ಜನರ ಸಾವು ನೋವಿಗೆ ಕಾರಣವಾಗಿದೆ.
ಭಾರತ ಮತ್ತು ಬ್ರೆಜಿಲ್ ನಲ್ಲಿ ಪ್ರತಿನಿತ್ಯ 15 ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಬ್ರೆಜಿಲ್ ನಲ್ಲಿ 13 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು 57 ಸಾವಿರ ಮಂದಿ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಈ ವೈರಸ್ ಅಕ್ಷರಶಃ ಅಟ್ಟಹಾಸ ಮೆರೆದಿದ್ದು ಸುಮಾರು 25 ಲಕ್ಚ ಮಂದಿ ಸೋಂಕಿತರಾಗಿದ್ದಾರೆ, ಅದರ ಜೊತೆಗೆ 1.28 ಲಕ್ಷ ಮಂದಿ ಮೃತಪಟ್ಟಿದ್ದಾರೆ.
ರಷ್ಯಾದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು(6.27 ಲಕ್ಷ) ಆದರೆ ಇಲ್ಲಿ ಮೃತರ ಪ್ರಮಾಣಕ್ಕೆ ಕಡಿವಾಣ(8,969) ಬಿದ್ದಿದೆ. ಇನ್ನು ಜಾಗತಿಕವಾಗಿ 4ನೇ ಹಾಟ್ ಸ್ಪಾಟ್ ಎನಿಸಿಕೊಂಡ ಭಾರತದಲ್ಲಿ 5.29 ಲಕ್ಷ ಮಂದಿ ವೈರಣುವಿಗೆ ಭಾಧಿತರಾಗಿದ್ದು, 16 ಸಾವಿರಕ್ಕಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಮಾತ್ರವಲ್ಲದೆ ಯುಕೆ, ಸ್ಪೇನ್, ಪೆರು, ಚೀಲಿ, ಇಟಲಿ, ಇರಾನ್, ಮೆಕ್ಸಿಕೋ, ಪಾಕಿಸ್ಥಾನ ದಲ್ಲಿಯೂ ಸೋಂಕಿತರ ಮತ್ತು ಮೃತರ ಪ್ರಮಾಣ ಹೆಚ್ಚಾಗುತ್ತಲೆ ಇದೆ.