ಲಂಡನ್ : ಆ್ಯಶಸ್ ಸೋಲಿನ ಬಳಿಕ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ಇಂಗ್ಲೆಂಡ್ ಸಾಹಸವನ್ನು ಕಾಂಗರೂ ನಾಡಿನ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಶ್ಲಾಘಿಸಿದ್ದಾರೆ. ಇಂಗ್ಲೆಂಡ್ ಮುಂದಿನ ವರ್ಷದ ಐಸಿಸಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಿಶ್ವಕಪ್ ಪಂದ್ಯಾವಳಿಯ ವೇಳೆ ಮೊದಲ ಸುತ್ತಿನಲ್ಲೇ ಹೊರಬಿದ್ದ ಬಳಿಕ ಇಂಗ್ಲೆಂಡಿನ ಏಕದಿನ ಶೈಲಿಯೇ ಬದಲಾಗಿದೆ. ಈ 3 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಏಕದಿನ ಸ್ಪೆಷಲಿಸ್ಟ್ ಆಟಗಾರರ ದೊಡ್ಡ ಪಡೆಯೊಂದಿಗೆ ಸಾಧನೆಯಲ್ಲಿ ಬಹಳ ಎತ್ತರಕ್ಕೇರಿದೆ. ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ 4-1ರಿಂದ ಸರಣಿ ಸೋಲಿಸಿದ್ದು ಇದಕ್ಕೊಂದು ಶ್ರೇಷ್ಠ ನಿದರ್ಶನ ಎಂದು ಮೆಕ್‌ಗ್ರಾತ್ ಅಂಕಣವೊಂದರಲ್ಲಿ ಬರೆದಿದ್ದಾರೆ.
“ಕಳೆದ 22 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ 19ರಲ್ಲಿ ಜಯ ಸಾಧಿಸಿದೆ. ಇದೇ ಗೆಲುವಿನ ಲಯವನ್ನು ಕಾಯ್ದುಕೊಂಡರೆ, ಇದೇ ಮ್ಯಾಚ್ ವಿನ್ನಿಂಗ್ ಆಟಗಾರರನ್ನು ಹೊಂದಿದ್ದರೆ ಇಂಗ್ಲೆಂಡನ್ನು ಸೋಲಿಸುವುದು, ಅದೂ ಅವರದೇ ನೆಲದಲ್ಲಿ ಹಿಮ್ಮೆಟ್ಟಿಸುವುದು ನಿಜಕ್ಕೂ ಕಷ್ಟವಾಗಲಿದೆ.
ಆಲ್‌ರೌಂಡರ್ ಬೆನ್ ಸೊಕ್ಸ್ ಪುನರಾಗಮನದ ಬಳಿಕ ಇಂಗ್ಲೆಂಡ್ ಇನ್ನಷ್ಟು ಬಲಶಾಲಿ ಆಗಲಿದೆ’ ಎಂದು ಮೆಕ್‌ಗ್ರಾತ್ ಅಭಿಪ್ರಾಯಪಡುತ್ತಾರೆ.
ವಿಶ್ವಕಪ್ ಪಂದ್ಯಾವಳಿಗೆ ಇನ್ನೂ ಒಂದು ವರ್ಷವಿದೆ. ಈ ಅವಧಿಯಲ್ಲಿ ಇಂಗ್ಲೆಂಡ್ ಇದೇ ಎತ್ತರವನ್ನು ಕಾಯ್ದುಕೊಳ್ಳುವುದಷ್ಟೇ ಅಲ್ಲ, ಇದಕ್ಕಿಂತಲೂ ಉತ್ತಮ ಮಟ್ಟದ ಆಟವನ್ನು ಪ್ರದರ್ಶಿಸಬೇಕಿದೆ ಎಂಬ ಸಲಹೆಯನ್ನೂ ಮೆಕ್‌ಗ್ರಾತ್ ನೀಡಿದ್ದಾರೆ.