ಕಲಬುರಗಿ: ಕಳೆದ ವರ್ಷ ಕೊರೊನಾ ಲಾಕ್‌ಡೌನ್ ವೇಳೆ ನಗರದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ತುಣುಕುಗಳು ತುಂಬಾ ವೈರಲ್ ಆಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಕೊರೊನಾ ಕಾರಣ “ಅಟೋಮ್ಯಾಟಿಕ್ ಪಾಸ್ ಆಗ್ತೀವೆ’ ಎಂದು ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳುವ, ಕೊರೊನಾಗೆ ನಮ್ಮ ಜೀವನಶೈಲಿ ಬದಲಾವಣೆಯೇ ಕಾರಣ ಎನ್ನುವ ಪರಿಣಾಮಕಾರಿ ಸಂದೇಶ ಹಾಗೂ ಕೊರೊನಾದಿಂದ ಮನೆಯಲ್ಲಿ ಅಡುಗೆ ಮಾಡುವುದು ಹೆಚ್ಚಳವಾಗಿರುವುದು, ಮನೆಯಲ್ಲಿ ಮಹಿಳೆಯರ ಕೆಲಸ ಹೆಚ್ಚಳವಾಗಿರುವುದನ್ನು ಹಾಸ್ಯ ಹಾಗೂ ಸಂದೇಶದ ಮೂಲಕ ಹೇಳಿರುವ ತುಣುಕುಗಳು ಮನೆಮಾತಾಗಿವೆ.
ನಗರದಲ್ಲಿ “ಸುರಚಿತ್ರ ಮೆಲೋಡಿಸ್’ ನಡೆಸುತ್ತಿರುವ ರೇಖಾ ಪಾಟೀಲ ಅವರೇ ಅಜ್ಜಿ ಪಾತ್ರದಲ್ಲಿ ನಿರೂಪಿಸಿದ ತುಣುಕುಗಳೇ ಸದ್ದು ಮಾಡಿದ್ದು, ಕಲಬುರಗಿಯ ಟಿಕ್‌ಟಾಕ್ ಅಜ್ಜಿ ಎಂಬ ಖ್ಯಾತಿ ತಂದುಕೊಟ್ಟಿವೆ. ಈಗ ದೀಪಾವಳಿ ಹಬ್ಬ ಇರುವುದರಿಂದ ಹಬ್ಬಕ್ಕೆ ತಾಮ್ರದ ಕೊಡದಲ್ಲಿ ನೀರು ತುಂಬುವ ಕುರಿತು ಸಂಪ್ರದಾಯ ಬಿಂಬಿಸುವ ಸಂದೇಶ; ರೊಟ್ಟಿ ಮೊಸರು, ಹಾಲು ಉಂಡು ಉತ್ತಮ ಆರೋಗ್ಯ ಬೆಳೆಸಿಕೊಳ್ಳಿ ಎಂಬ ಸಂದೇಶ ಸಾರುವ ತುಣುಕುಗಳು ವೈರಲ್ ಆಗಿವೆ.
ಅಜ್ಜಿ ಪಾತ್ರಕ್ಕೆ ಸ್ಫೂರ್ತಿ
ಮೊದಲು ಕೆಲವು ಸಣ್ಣ ಪುಟ್ಟ ಟಿಕ್‌ಟಾಕ್‌ಗಳನ್ನು ರೇಖಾ ಪಾಟೀಲ ಮಾಡಿದ್ದರು. ಆದರೆ ಅದಕ್ಕೆ ಕೆಲವರು “ಮುದುಕಿ ಆಗ್ಯಾಳ ಟಿಕ್‌ಟಾಕ್ ಏನ್ ಮಾಡ್ತಾರ್’ ಎಂದು ಟೀಕಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ರೇಖಾ ಮಗನ ಸಲಹೆಯಂತೆ ಅಜ್ಜಿ ಪಾತ್ರದಲ್ಲಿ ಟಿಕ್‌ಟಾಕ್ ಮಾಡಿ ಜನಮನ ಗೆದ್ದರು. ಲಾಕ್‌ಡೌನ್ ವೇಳೆ ಆರ್ಕೆಸ್ಟ್ರಾ ಸಂಪೂರ್ಣ ನಿಂತಿದ್ದರಿಂದ ಟಿಕ್‌ಟಾಕ್ ಸಮಯ ದೂಡಿತು ಎನ್ನುತ್ತಾರೆ ಸಿನೆಮಾಗಳಲ್ಲೂ ನಟಿಸಿರುವ ರೇಖಾ.
ಟಿಕ್‌ಟಾಕ್ ಈಗ ಬ್ಯಾನ್ ಆಗಿದ್ದರಿಂದ ಜೋಶ್ ಹಾಗೂ ಇನ್‍ಸ್ಟಾಗ್ರಾಮ್ ಹಾಗೂ ಯುಟ್ಯೂಬ್‌ನಲ್ಲಿ ವಿಡಿಯೋ ತುಣುಕುಗಳನ್ನು ಅಪಲೋಡ್ ಮಾಡಲಾಗುತ್ತಿದೆ. ಈಗ “ಟಿಕ್ ಟಾಕ್ ಅಜ್ಜಿ’ ಎಂದೇ ತಮ್ಮನ್ನು ಗುರುತಿಸುತ್ತಾರೆ. ಮಗ ಅಭಯ ಪಾಟೀಲ ಪಾತ್ರವೂ ಟಿಕ್ ಟಾಕ್‌ಗೆ ಸಂಬಂಧಿಸಿದಂತೆ ನೀಡುವ ಸಲಹೆಗಳೇ ಪ್ರಮುಖವಾಗಿವೆ.
-ರೇಖಾ ಪಾಟೀಲ, ಟಿಕ್‌ಟಾಕ್ ಅಜ್ಜಿ