Advertisement

ನಿಮ್ಮನೆ ತ್ಯಾಜ್ಯ ನಮಗೆ ಕೊಡಿ ಪ್ಲೀಸ್‌!

01:18 AM Jul 07, 2019 | Lakshmi GovindaRaj |

ಬೆಂಗಳೂರು: ವಾರ್ಡ್‌ ನಂ.113ರಲ್ಲಿ ಬಿಬಿಎಂಪಿ ಮತ್ತು ಸಾಹಸ್‌ ಸಂಸ್ಥೆ ಒಂದು ಕಿಯೋಸ್ಕ್ (ಘಟಕ) ಅನ್ನು ತೆರೆದಿದೆ. ಈ ಘಟಕ ಯಾವುದೇ ವಸ್ತುಗಳ ಮಾರಾಟಕ್ಕಲ್ಲ, ಬದಲಿಗೆ ಸಾರ್ವಜನಿಕರಿಂದ ತ್ಯಾಜ್ಯ ಪಡೆದುಕೊಳ್ಳುವುದಕ್ಕೆ!

Advertisement

ನಗರದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಕ್ಕೆ ಬಿಬಿಎಂಪಿಯ ತ್ಯಾಜ್ಯ ಸಂಗ್ರಹ ವಾಹನಗಳು ಬೆಳಗ್ಗೆ ಬರುತ್ತಿದ್ದರೂ, ಕೆಲವು ಸಾರ್ವಜನಿಕರು ನಾನಾ ಕಾರಣಗಳಿಂದ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಬರುವವರಿಗೆ ತ್ಯಾಜ್ಯ ನೀಡುವುದಿಲ್ಲ. ಬದಲಾಗಿ, ನಿವೇಶನ, ರಸ್ತೆ ಬದಿ ಸೇರಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಇದಕ್ಕೆ ಇಂದಿಗೂ ಕೆಲವರು ವಾಹನ ಸರಿಯಾದ ಸಮಯದಲ್ಲಿ ಬರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ತ್ಯಾಜ್ಯ ಸಂಗ್ರಹ ವಾಹನ ಬಂದಾಗ ನಾವು ಇರುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.

ಈ ಆರೋಪ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ತಪ್ಪಿಸುವ ಉದ್ದೇಶದಿಂದ ವಾರ್ಡ್‌ ಸಂಖ್ಯೆ 113ರ (ಕೋನೇನ ಅಗ್ರಹಾರ) ಮುರುಗೇಶಪಾಳ್ಯದ ವಿಂಟನಲ್‌ ರಸ್ತೆಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಸಾಹಸ್‌ ಸಂಸ್ಥೆ ಪ್ರಯೋಗಿಕವಾಗಿ ತ್ಯಾಜ್ಯ ಸಂಗ್ರಹ ಕಿಯೋಸ್ಕ್ (ಕಸ ಕಿಯೋಸ್ಕ್) ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಥಾಪಿಸಿದೆ. ಈ ಘಟಕಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬಿಬಿಎಂಪಿ ತ್ಯಾಜ್ಯ ಸಂಗ್ರಹ ವಾಹನಗಳು ಬಂದಾಗ ಅವುಗಳಿಗೆ ತ್ಯಾಜ್ಯ ನೀಡಲು ಸಾಧ್ಯವಾಗುವುದಿಲ್ಲ ಇದಕ್ಕೆ ಸಮಯದ ಹೊಂದಾಣಿಕೆಯಾಗದಿರುವುದು ಒಂದು ಕಾರಣ. ಇನ್ನು ಬೆಳಗ್ಗೆ ಬೇಗನೆ ಹೋಗಿ ಸಂಜೆ ಕೆಲಸದಿಂದ ಮರಳುವವರು ಅನಿವಾರ್ಯ ಕಾರಣಗಳಿಂದ ತ್ಯಾಜ್ಯವನ್ನು ರಸ್ತೆಗೆ ಎಸೆಯುತ್ತಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಿಯೋಸ್ಕ್ ಘಟಕವನ್ನು ಅಂದಾಜು 1.25 ಲಕ್ಷ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗಿದ್ದು, ಸಾಹಸ್‌ ಸಂಸ್ಥೆ ಇದರ ನಿರ್ವಹಣೆ ಮಾಡುತ್ತಿದೆ.

ಪ್ರತಿದಿನ ಬೆಳಗ್ಗೆ 7ರಿಂದ 11 ಗಂಟೆ ಮತ್ತು ಸಂಜೆ 7ರಿಂದ 11 ಗಂಟೆಯವರೆಗೆ ಈ ಘಟಕ ತೆರೆದಿರುತ್ತದೆ. ಇದರಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಹಾನಿಕಾರಕರ ತ್ಯಾಜ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಿಯೇ ನೀಡುವಂತೆ ಅರಿವು ಮೂಡಿಸುತ್ತಿದ್ದು, ಇದು ಬಹುತೇಕ ಯಶಸ್ವಿಯಾಗಿದೆ.

Advertisement

“ಆರಂಭದಲ್ಲಿ ನಿಮ್ಮ ಮನೆ ತ್ಯಾಜ್ಯವನ್ನು ನಮ್ಮ ಬಳಿ ತಂದು ಕೊಡಿ ನಾವು ಬಿಬಿಎಂಪಿಗೆ ಹಸ್ತಾಂತರಿಸುತ್ತೇವೆ ಎಂದು ಮನೆ ಮನೆಗೆ ತೆರಳಿ ವಿವರಿಸಿ, ವಿನಂತಿ ಮಾಡಲಾಯಿತು. ಬೀದಿ ನಾಟಕ ಮತ್ತು ಕರಪತ್ರಗಳ ಮೂಲಕವೂ ಜಾಗೃತಿ ಮೂಡಿಸಲಾಯಿತು. ಇದೆಲ್ಲದರ ಪರಿಣಾಮ ಮೊದಲು ಎರಡರಿಂದ ಮೂರು ಜನ ಮಾತ್ರ ಘಟಕಕ್ಕೆ ಬಂದು ತ್ಯಾಜ್ಯ ನೀಡುತ್ತಿದ್ದರು ಈಗ ಬಡಾವಣೆಗಳ ಅರ್ಧದಷ್ಟು ಜನ ಬಂದು ತಲುಪಿದೆ’ ಎಂದು ಮಾಹಿತಿ ನೀಡುತ್ತಾರೆ ಸಾಹಸ್‌ ಸಂಸ್ಥೆಯ, ಕಸ ಕಿಯೋಸ್ಕ್ ಯೋಜನಾಧಿಕಾರಿ ಸುನೀತಾ ಜಯರಾಮ್‌.

“ಸಾರ್ವಜನಿಕರು ಏಕೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಬ್ಲಾಕ್‌ಸ್ಪಾಟ್‌ಗಳು ಎಲ್ಲೆಲ್ಲಿ ಹೆಚ್ಚಾಗುತ್ತಿವೆ ಎನ್ನುವುದರ ಬಗ್ಗೆ ಮೊದಲು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಇದಕ್ಕೆ ಅನುಗುಣವಾಗಿ ಕಿಯೋಸ್ಕ್ ಕೇಂದ್ರ ತೆರೆಯುವ ಮತ್ತು ಮುಚ್ಚುವ ಸಮಯ ನಿಗದಿ ಮಾಡಲಾಯಿತು.

ಸಾಮಾನ್ಯವಾಗಿ ರಾತ್ರಿ 9 ಗಂಟೆ ನಂತರ ಸಾರ್ವಜನಿಕರು ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದರು. ಕಿಯೋಸ್ಕ್ ತೆರೆದ ನಂತರ ಬಡಾವಣೆಯಲ್ಲಿ ಬ್ಲಾಕ್ಸ್‌ ಸ್ಪಾಟ್‌ಗಳಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಿಯೋಸ್ಕ್ನಲ್ಲಿ ಪ್ರತಿ ತಿಂಗಳು ಅಂದಾಜು 5ರಿಂದ 6 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

ಹಳೇ ಚಾಳಿ ಬಿಡದ ಸಾರ್ವಜನಿಕರು: ಬಡಾವಣೆಯ ಶೇ.50ರಷ್ಟು ಸಾರ್ವಜನಿಕರು ಜವಾಬ್ದಾರಿಯಿಂದ ತ್ಯಾಜ್ಯವನ್ನು ಕಿಯೋಸ್ಕ್ಗೆ ತಂದು ಕೊಡುತ್ತಿದ್ದಾರೆ. ಆದರೆ, ಇಂದಿಗೂ ಹಲವರು ತ್ಯಾಜ್ಯವನ್ನು ಕಿಯೋಸ್ಕ್ಗಳ ಮುಂದೆಯೇ ಎಸೆದು ಹೋಗುತ್ತಿರುವುದು ಇಲ್ಲಿ ಕಾರ್ಯನಿರ್ವಹಿಸುವವರಿಗೆ ತಲೆನೋವಾಗಿ ಪರಿಣಮಿಸಿದೆ. 7 ಗಂಟೆಗೆ ಕಿಯೋಸ್ಕ್ ಪ್ರಾರಂಭವಾಗುತ್ತದೆ. ಆದರೆ ಅದಕ್ಕೂ ಮೊದಲೇ ಕೆಲವರು ತ್ಯಾಜ್ಯವನ್ನು ಕಿಯೋಸ್ಕ್ನ ಮುಂದೆ ಎಸೆಯುತ್ತಿದ್ದಾರೆ.

ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ತಪ್ಪಿಸುವ ಉದ್ದೇಶದಿಂದ ಕಿಯೋಸ್ಕ್ ಪರಿಚಯಿಸಲಾಗಿದೆ. ಇದರ ಫ‌ಲಿತಾಂಶ ನೋಡಿಕೊಂಡು ಮುಂದಿನ ದಿನಗಳಲ್ಲಿ ಬೇರೆ ಪ್ರದೇಶಗಳಲ್ಲೂ ಕಿಯೋಸ್ಕ್ ಪ್ರಾರಂಭಿಸುವ ಬಗ್ಗೆ ಚಿಂತಿಸಲಾಗುವುದು.
-ರಂದೀಪ್‌, ವಿಶೇಷ ಆಯುಕ್ತ (ಘನ ತ್ಯಾಜ್ಯ ವಿಭಾಗ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next