Advertisement

ಪುಡಿಗಾಸು ನೀಡಿ ಭೂ ಸ್ವಾಧೀನಕ್ಕೆ ಕಿಡಿ

07:43 AM Mar 12, 2019 | Team Udayavani |

ತುಮಕೂರು: ಜಿಲ್ಲೆಯ ರೈತರು ಸತತ ಬರಗಾಲದಿಂದ ಸಂಕಷ್ಟ ಅನುಭವಿಸುತ್ತಿರುವಾಗ ನೂರಾರು ವರ್ಷಗಳಿಂದ ತೆಂಗು ಬೆಳೆ ನಂಬಿ ಬದುಕಿರುವ ತೆಂಗು ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಪುಡಿಗಾಸು ನೀಡಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಸೋಮವಾರ ನೂರಾರು ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ರೈತರು ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ರೈತರಿಗೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಹೊತ್ತು ಧರಣಿ ಮಾಡಿದರು.

ಒಣಗುತ್ತಿರುವ ತೆಂಗಿನ ಮರಗಳು: ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಲ್ಪತರು ನಾಡು ಎಂದು ಪ್ರಸಿದ್ಧವಾದ ತುಮಕೂರು ತೀವ್ರ ಬರಕ್ಕೆ ತುತ್ತಾಗಿದ್ದು, ಜಿಲ್ಲೆಯಲ್ಲಿ ತೆಂಗಿನ ಮರಗಳು ಒಣಗುತ್ತಿವೆ. ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ಒಣಗಿದ್ದು, ರೈತರು ಬೀದಿಗೆ ಬಂದಿದ್ದಾರೆ. ಭೂಸ್ವಾಧೀನ ಪಡಿಸಿಕೊಂಡಿರುವ ರೈತರ ಭೂಮಿಗೆ ಕಡಿಮೆ ಬೆಲೆ ನೀಡುವುದನ್ನು ವಿರೋಧಿಸುವುದಾಗಿ ತಿಳಿಸಿದರು.

ಸಮಗ್ರ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜಿಲ್ಲೆಗೆ ನೀರು ಒದೊಗಿಸಬೇಕಾಗಿರುವ ಹೇಮಾವತಿ, ತುಂಗಾಭದ್ರಾ ಮತ್ತು ಎತ್ತಿನಹೊಳೆ ಯೋಜನೆಯನ್ನು ತುರ್ತಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯ ರೈತರ ಹಿತವನ್ನು ಕಾಯಲು ಸಮಗ್ರ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸಹಿಸುವುದಿಲ್ಲ: ಜಿಲ್ಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ, ನೀರಾವರಿ ತ್ವರಿತಗೊಂಡರೆ ರೈತರ ಜೀವನ ಮಟ್ಟ ಸುಧಾರಿಸಲಿದೆ. ತೆಂಗಿನ ಮರಗಳು ಚೇತರಿಸಿಕೊಳ್ಳುತ್ತವೆ.  ಅಧಿಕಾರಿಗಳು ಚುನಾವಣೆ ನೆಪವೊಡ್ಡಿ ಬರದ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ನಾಲೆ ಅಗಲೀಕರಣಕ್ಕೆ ನಿರ್ಲಕ್ಷ್ಯ: ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಗೋವಿಂದರಾಜು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮಳೆಯಿಲ್ಲದೆ ಜಿಲ್ಲೆಯಲ್ಲಿ ಕೊಳವೆಬಾವಿಗಳು ಬತ್ತಿವೆ. ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಿಲ್ಲ. ಹೇಮಾವತಿ ನಾಲಾ ಅಗಲೀಕರಣ ಮಾಡದೇ ಇರುವುದರಿಂದ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಹಾಗೂ ಜನಪ್ರತಿನಿಧಿಗಳು ನಾಲೆ ಅಗಲೀಕರಣ ಮಾಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು. ಗುಬ್ಬಿಯ ಕಡಬ ಕೆರೆಯಿಂದ ಮಾಗಡಿ-ಕನಕಪುರಕ್ಕೆ ಕುಣಿಗಲ್‌ ಮೂಲಕ ನೀರು ಕೊಂಡೊಯ್ಯಲು ಮಾಡುತ್ತಿರುವ ಯೋಜನೆ ಕೈಬಿಟ್ಟು, ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಸೇರಿದಂತೆ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ ಮಾತನಾಡಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವ ಹಾಗೂ ವ್ಯವಸ್ಥಿತವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ನಿಜಾಮರು ಕಟ್ಟಿಸಿದ್ದ ಕೆರೆ ಕಟ್ಟೆಗಳು ಹಾಳುಬಿದ್ದಿವೆ. ಇದುವರೆಗೆ ಆಡಳಿತಕ್ಕೆ ಬಂದ ಯಾವ ಸರ್ಕಾರವೂ ನೀರಾವರಿಗೆ ಒತ್ತು ನೀಡದೇ ಇದ್ದರಿಂದ ಕೃಷ್ಣ, ತುಂಗಾಭದ್ರಾ, ಕಾವೇರಿಯಿಂದ ನೀರು ಹೊರರಾಜ್ಯಗಳ ಪಾಲಾಯಿತು ಎಂದು ಹೇಳಿದರು.

ನೀರಾವರಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನೊಲೆನೂರು ಶಂಕರಪ್ಪ, ರಾಮಸ್ವಾಮಿ, ಸುರೇಶ್‌ ಮಾತನಾಡಿದರು. ಈ ವೇಳೆ ಎಂ.ರಾಮು, ರಾಮಕೃಷ್ಣಯ್ಯ, ಲೋಕೇಶ್‌ ರಾಜೇ ಅರಸ್‌, ಹೊಸೂರ ಕುಮಾರ್‌, ಗೋಪಾಲ್‌, ಜೆ.ಸಿ.ಶಂಕರಪ್ಪ, ಕೆ.ಎನ್‌.ವೆಂಕಟೇಗೌಡ, ದೊಡ್ಡಮಾಳಯ್ಯ, ರವೀಶ್‌, ಚಿರತೆ ಚಿಕ್ಕಣ್ಣ, ಮೂಡಲಗಿರಿಯಪ್ಪ, ನಾಗರತ್ನಮ್ಮ, ದ್ರಾûಾಯಣಮ್ಮ, ಶ್ರೀನಿವಾಸ್‌ಗೌಡ, ರವಿಪೂಣಚ್ಚ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next