ಬೆಂಗಳೂರು: ಜಾಹೀರಾತು ಫಲಕಗಳ ತೆರವಿಗೆ ನೋಟಿಸ್ ನೀಡಿದರೂ ತೆರವು ಮಾಡದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ನಗರದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು, ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದು 3729 ಜಾಹೀರಾತು ಫಲಕಗಳನ್ನು ಗುರ್ತಿಸಲಾಗಿದ್ದು, 107 ಫಲಕಗಳನ್ನು ಮಾಲೀಕರೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದಾರೆ. ಆದರೆ, 1987 ಫಲಕಗಳ ತೆರವಿಗೆ ನೋಟಿಸ್ ನೀಡಿದರೂ ಮಾಲೀಕರು ತೆರವುಗೊಳಿಸಿಲ್ಲ ಎಂದು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾಹೀರಾತು ಫಲಕ ತೆರವು ಮಾಡದವರ ವಿರುದ್ಧ ಕರ್ನಾಟಕ ತೆರೆದ ಪ್ರದೇಶ ಹಾಗೂ ವಿರೂಪಗೊಳಿಸುವ ನಿರ್ಬಂಧ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿ, ಅಲ್ಲದೆ, ಸಂಬಂಧ ಪಟ್ಟ ಮಾಲೀಕರ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಿ ಎಂದು ಪಾಲಿಕೆಗೆ ನಿರ್ದೇಶಿಸಿತು.
ಜತೆಗೆ, ಬಿಬಿಎಂಪಿ ವ್ಯಾಪ್ತಿಗೆ ಅನ್ವಯವಾಗುವಂತೆ ಜಾಹೀರಾತು ನೀತಿ ಕುರಿತು ಸರ್ಕಾರದ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆಯೂ ಸೂಚಿಸಿರುವ ನ್ಯಾಯಪೀಠ, ಸೆ.17ಕ್ಕೆ ವಿಚಾರಣೆ ಮುಂದೂಡಿದೆ.