Advertisement

ದೇವದಾಸಿ ಮಹಿಳೆಯರಿಗೆ ವಿಶೇಷ ಅನುದಾನ ನೀಡಿ

06:13 PM Jul 16, 2022 | Team Udayavani |

ಗದಗ: ದೇವದಾಸಿ ಮಹಿಳೆಯರ ಬದುಕು ಹಸನಾಗಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಭಾರೀ ಪ್ರತಿಭಟನೆ ನಡೆಸಿದರು.

Advertisement

ಶುಕ್ರವಾರ ಸ್ಥಳೀಯ ಗದಗ-ಬೆಟಗೇರಿ ನಗರಸಭೆ ಆವರಣದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಡಳಿತ ಭವನವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರಾಜ ಮಾತನಾಡಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಜಂಟಿಯಾಗಿ ಅನೇಕ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ, ಪ್ರತಿಭಟನೆಗಳನ್ನು ನಡೆಸಿದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾದ ಅನುದಾನ ಪ್ರತಿ ವರ್ಷ ಸುಮಾರು 30,000 ಕೋಟಿ ರೂ.ಗಳಿಷ್ಟಿದೆ. ಆದರೂ ಅದನ್ನು ನಮ್ಮಂತಹ ಅಗತ್ಯ ಜನಸಮುದಾಯಗಳಿಗೆ ಬಳಕೆ ಮಾಡದೇ ಪ್ರತಿ ವರ್ಷ ಸುಮಾರು 3,000 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಉಳಿಸುತ್ತಿರುವುದು ಖಂಡನೀಯ ಎಂದರು.

ರಾಜ್ಯ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಎಲ್ಲಾ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು ಕನಿಷ್ಟ 5 ಸಾವಿರ ರೂ. ಗೆ ಹೆಚ್ಚಿಸಬೇಕು. ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ತಕ್ಷಣವೇ ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರ ಗಣತಿ ಮಾಡಿ ಅವರಿಗೂ ಪುನರ್ವಸತಿ ಕಲ್ಪಿಸಬೇಕು.

Advertisement

ರಾಜ್ಯಾದ್ಯಂತ ನಿರುಪಯೋಗಿಯಾಗಿರುವ ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿ ಕೃಷಿ ಮತ್ತಿತರ ಫಾರಂಗಳ ಜಮೀನುಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಮುಖಂಡ ಬಾಲು ರಾಠೊಡ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ದೇವಮ್ಮ ಜೋಗಣ್ಣವರ, ಹುಲಿಗೆಮ್ಮ ಮಾತಿನ, ನಿಂಗಮ್ಮ ತಡಹಾಳ, ಗೀತಾ ತೆಗ್ಗಿನಮನಿ, ಕರಿಯಪ್ಪ ಚಲವಾದಿ, ನಾಗಪ್ಪ ಮಾದರ, ಅಡಿವೆಮ್ಮ ಬೆಳಗಟ್ಟಿ, ಹನುಮವ್ವ ಚಲವಾದಿ, ದುರಗಮ್ಮ ಮಾದರ, ಶಿವವ್ವ ನಿಡಗುಂದಿ, ಮಾದೇವಿ ದೊಡ್ಡಮನಿ, ಮಲ್ಲಿಕಾರ್ಜುನ ಮಾದರ, ಮುತ್ತಪ್ಪ ಮುದೇನಗುಡಿ, ಕೆಂಚಪ್ಪ ಮಾದರ, ನಾಗರಾಜ ಮುಂಡರಗಿ, ವಿಜಯ ಗಲಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next