Advertisement

ಸೂಕ್ತ ಸಮಯಕ್ಕೆ ಬಿತ್ತನೆ ಬೀಜ-ರಸಗೊಬ್ಬರ ನೀಡಿ

02:37 PM Jun 07, 2022 | Team Udayavani |

ಮಸ್ಕಿ: ಮುಂಗಾರು ಆರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ನೀಡುವ ಮೂಲಕ ಯಾವುದೇ ಕೊರತೆ, ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಶಾಸಕ ಆರ್‌.ಬಸನಗೌಡ ತುರುವಿಹಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪಟ್ಟಣದ ತಾಪಂ ಆವರಣದಲ್ಲಿ ತ್ತೈ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಗಾರು ಉತ್ತಮ ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಸೂರ್ಯಕಾಂತಿ, ಹತ್ತಿ, ತೊಗರಿ ಸೇರಿ ರೈತರು ಕೇಳುವ ಯಾವುದೇ ಬೀಜ ಕೊರತೆ ಇಲ್ಲದಂತೆ ಸೂಕ್ತ ಸಮಯಕ್ಕೆ ಪೂರೈಸಿ, ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ದರ, ನಕಲಿ ಬೀಜ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದರು.

ಅರಣ್ಯ ಇಲಾಖೆಯಿಂದ ಕ್ಷೇತ್ರದಲ್ಲಿ 1 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದು, ನರೇಗಾ ಯೋಜನೆಯಡಿ ಗ್ರಾಪಂಗಳಿಗೆ ಸಸಿ ವಿತರಣೆಗೆ ತಾಂತ್ರಿಕ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಿ ಸಸಿಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಶರಣಯ್ಯಸ್ವಾಮಿ ಗುಡದೂರು, ಅರಣ್ಯ ಇಲಾಖೆ ಸಸಿ ನೆಡದೇ ಬೋಗಸ್‌ ಬಿಲ್‌ ಎತ್ತುವಳಿ ಮಾಡಲಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪುಸ್ತಕ, ಬಟ್ಟೆ ಇಲ್ಲ

Advertisement

ಕ್ಷೇತ್ರದ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಕನ್ನಡ, ಸಮಾಜ ವಿಜ್ಞಾನ ಪುಸ್ತಕ ವಿತರಣೆಯಾಗಿಲ್ಲ. ಸಮವಸ್ತ್ರ, ಸೈಕಲ್‌ ವಿತರಣೆಯೂ ವಿಳಂಬವಾಗಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶರಣಪ್ಪ ವಟಗಲ್‌, ಹುಂಬಣ್ಣ ರಾಠೊಡ್‌ ಸಭೆಗೆ ತಿಳಿಸಿದರು.

ಆಗ ಶಾಸಕರು ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ನೀಡಬೇಕಾದ ಎಲ್ಲ ಸೌಕರ್ಯಗಳನ್ನು ಸಕಾಲಕ್ಕೆ ಪೂರೈಸಿ. ಅನಗತ್ಯ ವಿಳಂಬ ಮಾಡದಿರಿ ಎಂದು ಎಚ್ಚರಿಕೆ ನೀಡಿದರು. ಕುಡಿವ ನೀರಿನ ತೊಂದರೆಯಾಗದಂತೆ ಜೆಜೆಎಂ ಯೋಜನೆಯಲ್ಲಿ ಕೈಗೊಂಡ ಬಹುತೇಕ ಕಾಮಗಾರಿ ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರಿಗೆ ನೋಟಿಸ್‌ ನೀಡಿ ಮರು ಟೆಂಡರ್‌ ಕರೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ, ಪ್ರಗತಿ ಹಂತದಲ್ಲಿರುವ ರಂಗಾಪೂರು, ಹಸಮಕಲ್‌, ಮಾಟೂರು, ಕುರಕುಂದಿ, ಏಳು ಮೈಲ್‌ ಮತ್ತು 3 ಮೈಲ್‌ ಕ್ಯಾಂಪಿನ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಟಿ. ರೋಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪವನ್‌ಕುಮಾರ, ತಾಪಂ ನಾಮನಿರ್ದೇಶಿತ ಸದಸ್ಯರಾದ ಶರಣಪ್ಪ ತೋರಣದಿನ್ನಿ, ಮಲ್ಲಿಕಾರ್ಜುನ ಜಾಲಿಹಳ, ಆರ್‌.ಟಿ ನಾಯ್ಕ, ಅಕ್ಕ ಮಹಾದೇವಿ ಸೇರಿದಂತೆ ಸಿಂಧನೂರು, ಲಿಂಗಸುಗೂರು ಮತ್ತು ಮಾನ್ವಿ ತಾಲೂಕಿನ ಇಲಾಖೆಯ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next