ಹುಣಸೂರು: ನಗರದಲ್ಲಿ ನಡೆದ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ತಾಲೂಕಿನ 621 ಮಂದಿ ನಿರುದ್ಯೋಗಿಗಳು ಕೌಶಲ್ಯತರಬೇತಿ ಹಾಗೂ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡರು. ನಗರದ ಅಂಬೇಡ್ಕರ್ ಭವನಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಇಲಾಖೆಯು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ ಕೊಂಡಿರುವುದೇ ಈ ಬಾರಿಯ ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದ ಮಾತನಾಡಿ, ಇಂತಹ ಉದ್ಯೋಗ ಮೇಳಗಳು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಗೊಂಡರೂ ಸಾಕಷ್ಟು ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಗ್ರಾಮೀಣ ಪ್ರದೇಶದವರಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಉದ್ಯೋಗ ಸಿಕ್ಕರೂ ಕಂಪನಿಗಳು ನೀಡುವ ವೇತನ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕಲ್ಪಿಸುವ ಉದ್ಯೋಗಾವಕಾಶ ಕಲ್ಪಿಸಬೇಕಿದೆ ಎಂದರು.
ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಮಸಿದ್ದ ಬಿರಾದಾರ್ ಮಾತನಾಡಿ, ಗ್ರಾಮೀಣ ಕೌಶಲ್ಯ ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ತರಬೇತಿ ವೇಳೆ 3 ಸಾವಿರ ರೂ ಸ್ಟೆಫಂಡ್, ಅಲ್ಲದೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳವರೆಗೆ ಅಲ್ಲಿನ ಸಂಬಳದ ಜೊತೆಗೆ ಸರಕಾರದಿಂದ ತಲಾ ಒಂದು ಸಾವಿರ ರೂ ಪ್ರೋತ್ಸಾಹ ಧನ ದೊರೆಯಲಿದೆ ಎಂದು ತಿಳಿಸಿದರು.
ಫೆಡಲಿಸ್ ಕಂಪನಿಯ ಸತೀಶ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿರುದ್ಯೋಗಿಗಳು ಬಯಸುವ ಅಗತ್ಯ ತರಬೇತಿಗಳನ್ನು ನೀಡಲಾಗುವುದಲ್ಲದೆ ಕೆಲಸ ಕಲ್ಪಿಸುವ ನಿಟ್ಟಿನಲ್ಲೂ ಈ ಯೋಜನೆ ಸಹಕಾರಿಯಾಗಿದೆ ಎಂದರು. ಜಿಪಂ ಯೋಜನಾ ನಿರ್ದೇಶಕಿ ಎಚ್.ಸಿ.ಎಂ.ರಾಣಿ ಮಾತನಾಡಿ, ಈ ಯೋಜನೆಯಡಿ ರೀಟೆಲ್ ಕ್ಷೇತ್ರ, ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್, ಕಸ್ಟಮರ್ ಕೇರ್, ಬಿಪಿಒ, ಅಸಿಸ್ಟ್ ಟ್ಯಾಲಿ ಹೌಸ್ ಕೀಪಿಂಗ್, ಕಂಪೂಟರ್ ಕುರಿತು ಸೇರಿದಂತೆ ಅನೇಕ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದಾಗಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿರಾವ್ ಇಂಡೋಲ್ಕರ್, ಇಒ ಕೃಷ್ಣಕುಮಾರ್, ತಹಶೀಲ್ದಾರ್ ಮೋಹನ್, ಜಿಲ್ಲಾ ಜೀವನೋಪಾಯ ಕಾರ್ಯಕ್ರಮ ವ್ಯವಸ್ಥಾಪಕ ಮಂಜೇಗೌಡ, ತಾ. ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳ ನರಗುಂದ ಮಾತನಾಡಿದರು. ವಿವಿಧ ಕಂಪನಿಗಳವರು ಅಭ್ಯರ್ಥಿಗಳಿಗೆ ಉದ್ಯೋಗದ ಕುರಿತು ಸಮಗ್ರ ಮಾಹಿತಿ ನೀಡಿದರು. ಸಂಜಿವಿನಿ ಯೋಜನೆಯ ತಾಲೂಕು ವ್ಯವಸ್ಥಾಪಕರು ಭಾಗವಹಿಸಿದ್ದರು.