ಹುಣಸೂರು: ಸರ್ಕಾರದ ವತಿಯಿಂದ ಹಳ್ಳಿಗಳಲ್ಲಿ ನೀಡಲು ಉದ್ದೇಶಿಸಿರುವ ಲೇಔಟ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಜಾಬಗೆರೆ ಕುಡಿಯುವ ಯೋಜನೆಯ ನೀರೊದಗಿಸಲು ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒ ಕೃಷ್ಣಕುಮಾರ್ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಪದ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾತನಾಡಿದರು.
ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದ ವೇಳೆ ಸೊಳ್ಳೆಪರದೆ ಬಳಸದಿರುವುದು, ಸ್ವತ್ಛತೆ ಕಾಪಾಡದಿರುವುದು ಹಾಗೂ ಮಾದಹಳ್ಳಿ ಹಾಡಿಯ ಕಾರ್ಯಕರ್ತೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದರು. ಮಹಿಳಾ ಮತ್ತು ಮಕ್ಕಳ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ತಾಪಂ ಅಧ್ಯಕ್ಷೆ ಪದ್ಮಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಾಕೀತು ಮಾಡಿದರೆ, ಪಶು ವೈದ್ಯಕೀಯ ಇಲಾಖೆ ವತಿಯಿಂದ ಹಾಲಿನ ಡೇರಿಗಳ ಮೂಲಕ ಹುಲ್ಲಿನ ಬೀಜ ವಿತರಿಸುವ ಬದಲಿಗೆ ನೇರವಾಗಿ ರೈತರಿಗೆ ವಿತರಿಸಬೇಕೆಂದು ಉಪಾಧ್ಯಕ್ಷ ಪ್ರೇಮಕುಮಾರ್ ಸೂಚನೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿರಾವ್, ಮುಳ್ಳೂರು ಮಾರ್ಗ ಬಸ್ ಮತ್ತೆ ಆರಂಭಿಸಬೇಕೆಂದು ಸಂಚಾರ ನಿಯಂತ್ರಕ ನಟರಾಜ್‌ಗೆ ಸೂಚಿಸಿದರು. ಆರೋಗ್ಯಾಕಾರಿ ಡಾ.ದೇವತಾಲಕ್ಷಿ ಆರೋಗ್ಯ ಇಲಾಖೆ ಯೋಜನೆಗಳ ಸೌಲಭ್ಯ ಪಡೆಯಲು ಹಾಡಿ ಮಂದಿ ಬ್ಯಾಂಕ್ ಖಾತೆ ತೆರೆದಿಲ್ಲವೆಂಬ ಮಾಹಿತಿಗೆ, ಎಲ್ಲಾ ಬ್ಯಾಂಕುಗಳಿಗೆ ಶೂನ್ಯ ಖಾತೆ ತೆರೆಯಲು ಸೂಚಿಸಲಾಗುವುದೆಂದು ಇಒ ತಿಳಿಸಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ನಗರದಲ್ಲಿನ ಶಿಥಿಲಗೊಂಡಿರುವ ರೇಷ್ಮೆ ಮಾರುಕಟ್ಟೆ ಕಟ್ಟಡ ಒಡೆದುಹಾಕಲು ತಾಂತ್ರಿಕ ತಜ್ಞರು ವರದಿ ನೀಡಿದ್ದಾರೆಂದರು.
ಕಾವೇರಿ-ಕಬಿನಿ ನೀರು: ತಾಪಂ ಒಂದು ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಕಾವೇರಿ ನದಿಯಿಂದ ತಾಲೂಕಿನ ಹಿರಿಕ್ಯಾತನಹಳ್ಳಿ ಭಾಗದ 45 ಹಾಗೂ ಕಬಿನಿಯಿಂದ ಧರ್ಮಾಪುರ ಭಾಗದ 57 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಾವಡಗೆರೆ ಬಳಿಯ ಜಾಬಗೆರೆಗೆ ಕಾವೇರಿ ನೀರು ಪೂರೆಸಲು 35 ಲಕ್ಷರೂ ವೆಚ್ಚದ ಯೋಜನೆ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದೆ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಣಪತಿರಾವ್ ಇಂಡೋಲ್ಕರ್ ಪ್ರಶ್ನೆಗೆ ಜಿಪಂ ಎಇಇ ರಮೇಶ್ ಮಾಹಿತಿ ನೀಡಿದರು.
ಮದ್ಯಮಾರಾಟ: ತಾಲೂಕಿನಲ್ಲಿ ತಿಂಗಳಿಗೆ ಸುಮಾರು 3 ಲಕ್ಷ ಲೀಟರ್‌ಗೂ ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ನಂತರ ಮುಚ್ಚಲಾಗಿದ್ದ 13 ಬಾರ್‌ಗಳು ಮತ್ತೆ ಆರಂಭಗೊಂಡಿವೆ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜ್ ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದರು.
ಶಾಲೆ ಬಿಟ್ಟ ಹಾಡಿ ಮಕ್ಕಳ ಗಣತಿ: ತಾಲೂಕಿನಲ್ಲಿ 54 ಹಾಡಿಗಳಿದ್ದು, ಅನೇಕ ಆದಿವಾಸಿ ಮಕ್ಕಳು ಶಾಲೆಯಿಂದ ವಂಚಿತಾಗಿರುವುದು ತಿಳಿದು ಬಂದಿದೆ. ಜಿಲ್ಲಾಕಾರಿಗಳ ಸೂಚನೆ ಮೇರೆಗೆ 81 ಶಿಕ್ಷಕ 27 ತಂಡ ಹಾಡಿಗಳಲ್ಲಿ ಸೆ.21 ರಿಂದ 28 ರವರೆಗೆ ಗಣತಿ ಕಾರ್ಯ ನಡೆಸಲಾಗುವುದು. ಚಿಕ್ಕ ಹುಣಸೂರು ಆದರ್ಶ ಶಾಲೆ ಪಕ್ಕ ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಿಸಿದ್ದು, ಪಕ್ಕದಲ್ಲಿ ಸ್ಮಶಾನಕ್ಕೆ ಸ್ಥಳ ನೀಡುವ ಮಾಹಿತಿ ಬಂದಿದೆ. ಇದನ್ನು ನೀಡಬಾರದೆಂದು ಬಿಇಒ ಎಸ್.ರೇವಣ್ಣ ಕೋರಿದರು.
ದೊಂಬರ ಕಾಲೋನಿ ಸಕ್ರಮ: ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮರದೂರು ಗ್ರಾಪಂ ದೊಂಬರ ಕಾಲೋನಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ವಾಸಮಾಡುತ್ತಿದ್ದ 24 ಕುಟುಂಬಗಳನ್ನು ಸಕ್ರಮಗೊಳಿಸಲಾಗಿದೆ. ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು. ಹಬ್ಬನಕುಪ್ಪೆ ಪರಿಶಿಷ್ಟರಿಗೆ ಭೂಮಿ ನೊಂದಣಿ ಮಾಡಿಕೊಡಲಾಗಿದೆ. ಕಟ್ಟೆಮಳಲವಾಡಿ, ಬಿಳಿಗೆರೆ, ಜಾಬಗೆರೆ, ಚಿಕ್ಕಬೀಚನಹಳ್ಳಿ ಸೇರಿದಂತೆ 10 ಗ್ರಾಮಗಳಲ್ಲಿ ಎಲ್ಲ ಜನಾಂಗದವರಿಗೆ ವಿತರಿಸಲು ನಿವೇಶನ ರಚನೆ ಕಾರ್ಯ ಶೀಘ್ರ ಮುಗಿಸಬೇಕೆಂದು ಜಿಪಂ ಎಇಇಗೆ ಇಒ ತಿಳಿಸಿದರು.