ಹುಬ್ಬಳ್ಳಿ: ನರೇಗಾ ನಿಯಮಾವಳಿಗಳಿಗೆ ಅನುಗುಣವಾಗಿ ಬೇಡಿಕೆ ಸಲ್ಲಿಸುವ ಎಲ್ಲರಿಗೂ ಜಾಬ್ ಕಾರ್ಡ್ ನೀಡಬೇಕು. ರೈತರ ಜಮೀನುಗಳಲ್ಲಿ ಕೃಷಿ ಬದು ಹಾಗೂ ಕೃಷಿಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಇಲ್ಲಿನ ಸರ್ಕ್ನೂಟ್ ಹೌಸ್‌ನಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಗೆ ಫಲವತ್ತಾದ ಭೂಮಿ ಮತ್ತು ನೀರು ಅಗತ್ಯ. ನರೇಗಾದಲ್ಲಿ ರೈತರಿಗೆ ಅಗತ್ಯ ಉದ್ಯೋಗ ಕಲ್ಪಿಸುವುದರೊಂದಿಗೆ ಜಮೀನುಗಳಲ್ಲಿ ಬದು ನಿರ್ಮಾಣ ಹಾಗೂ ಕೃಷಿಹೊಂಡ ನಿರ್ಮಿಸಿ ಅಂತರ್ಜಲ ಹೆಚ್ಚಿಸಬೇಕು. ಉತ್ತಮವಾದ ಮಳೆ ಆಗುತ್ತಿರುವುದರಿಂದ ಕೃಷಿಗೆ ಪೂರಕವಾದ ಕಾರ್ಯಗಳನ್ನು ರೈತರು ಅನುಸರಿಸುವಂತೆ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಕೃಷಿ ಬದು, ಕೃಷಿ ಹೊಂಡ ಹಾಗೂ ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಪ್ರಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಧಾರವಾಡ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ. ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಇದರಿಂದ ಬಹು ಜನರಿಗೆ ಉಪಯೋಗವಾಗುತ್ತದೆ. ಇಲಾಖೆಗೆ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಪೂರ್ಣ ಬಳಕೆ ಆಗುವಂತೆ ಮುತುವರ್ಜಿ ವಹಿಸಬೇಕೆಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ 1,38,880 ಉದ್ಯೋಗ ಚೀಟಿ ವಿತರಿಸಲಾಗಿದ್ದು, 3,49,764 ಕಾರ್ಮಿಕರಿದ್ದಾರೆ. ಇದರಲ್ಲಿ 63,039ಉದ್ಯೋಗ ಚೀಟಿ, 1,26,352 ಜನ ಸಕ್ರಿಯ ಕಾರ್ಮಿಕರಿದ್ದಾರೆ. 1,57,403 ಜನ ಮಹಿಳಾ ಕಾರ್ಮಿಕರಿದ್ದು,ಇದರಲ್ಲಿ 54,483 ಜನ ಸಕ್ರಿಯ ಮಹಿಳಾ ಕಾರ್ಮಿಕರಿದ್ದಾರೆ. 626 ಹೊಸ ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದರು.
ಕೃಷಿ ಬದು ನಿರ್ಮಾಣ ಅಭಿಯಾನದಲ್ಲಿ ಜಿಲ್ಲೆಯ ರೈತರ ಜಮೀನುಗಳಲ್ಲಿ ಗ್ರಾಪಂಗಳಿಂದ 31,136 ಮತ್ತು ಕೃಷಿ ಇಲಾಖೆಯಿಂದ 7,325 ಸೇರಿ ಒಟ್ಟು 38,461 ಕೃಷಿ ಬದುಗಳನ್ನು ನಿರ್ಮಿಸಲಾಗಿದೆ. ಗ್ರಾಪಂಗಳಿಂದ 384, ಕೃಷಿ ಇಲಾಖೆಯಿಂದ 105 ಸೇರಿದಂತೆ 489 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಜಲಾಮೃತ ಯೋಜನೆಯಲ್ಲಿ 2019-20 ನೇ ಸಾಲಿನಲ್ಲಿ ಹುಬ್ಬಳ್ಳಿ-ನವಲಗುಂದ ತಾಲೂಕಿನ ಒಟ್ಟು 19 ಕೆರೆಗಳ 111.24 ಹೆಕ್ಟೇರ್ ಭೂಮಿಯಲ್ಲಿ 4,76,460 ಘನ ಮೀಟರ್ ಹೂಳು ತೆಗೆಯಲಾಗಿದ್ದು, 145.87 ಲಕ್ಷ ರೂ.ವೆಚ್ಚ ಮಾಡಲಾಗಿದೆ. 2020-21 ನೇ ಸಾಲಿಗೆ ಜಿಲ್ಲೆಯ ಎಲ್ಲಾ ತಾಲೂಕಿನ 70 ಕೆರೆಗಳ ಸುಮಾರು 561.71 ಹೆಕ್ಟೇರ್ ಭೂಮಿ ಹೂಳೆತ್ತುವ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ.
2019-20 ನೇ ಸಾಲಿಗೆ ಕುಡಿಯುವ ನೀರು ಸರಬರಾಜ ಸಂಬಂಧಿಸಿದ 332 ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದು, 216 ಕಾಮಗಾರಿಗಳು ಪೂರ್ಣಗೊಂಡಿವೆ.116 ಕಾಮಗಾರಿ ಪ್ರಗತಿಯಲ್ಲಿವೆ. ಜಲಜೀವನ್ ಮೀಷನ್ ಯೋಜನೆಗಾಗಿ 2020-21 ನೇ ಸಾಲಿಗಾಗಿ 57 ಗ್ರಾಮಗಳಿಗೆ ಸಂಪೂರ್ಣ ಕುಡಿಯುವ ನೀರಿನ ಕಾರ್ಯಕ್ರಮ ಕೈಗೊಳ್ಳಲು 7,350 ಲಕ್ಷ ರೂ.ಗಳ ಕ್ರಿಯಾಯೋಜನೆ ಸಲ್ಲಿಸಲಾಗಿದ್ದು, 41,574 ಮನೆಗಳಿಗೆ ಕುಡಿಯುವ ನೀರಿನ ನಳ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಸಿಇಒ ತಿಳಿಸಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಕುಡಿಯುವ ನೀರಿನ ಕಾಮಗಾರಿ, ನೆರೆ ಪರಿಹಾರ ಕಾಮಗಾರಿಗಳ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
ಶಾಸಕಿ ಕುಸುಮಾವತಿ ಶಿವಳ್ಳಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ| ಕೆ.ಎಂ.ರಾಮಚಂದ್ರ ಇನ್ನಿತರಿದ್ದರು.