Advertisement

ಮುಂಗಾರುವರೆಗೆ ನೀರು-ಮೇವು ಕೊಡಿ

12:42 PM Apr 18, 2017 | Team Udayavani |

ಮೈಸೂರು: ಮುಂಗಾರು ಮಳೆ ಆಶಾದಾಯಕವಾಗಿ ಬೀಳುವವರೆಗೆ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸುವ ಜತೆಗೆ ಬರ ಕಾಮಗಾರಿ ಕೈಗೊಂಡು ದುಡಿಯುವ ಕೈಗೆ ಉದ್ಯೋಗ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಜಿಲ್ಲಾಡಳಿತಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಬರ ಪರಿಹಾರ ಹಾಗೂ ಜಿಲ್ಲೆಯ ಅಭಿವೃದ್ಧಿ ವಿಷಯಗಳ ಕುರಿತು ಪ್ರಗತಿಪರಿಶೀಲನೆ ನಡೆಸಿದರು.

Advertisement

ಜ. 25ರಂದು ಮುಖ್ಯಮಂತ್ರಿ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಈ ಮೂರು ತಿಂಗಳಲ್ಲಿ ಏನೇನು ಪ್ರಗತಿಯಾಗಿದೆ ಎಂದು ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿ ಪಡೆದ ಸಚಿವರು, ಮೇ ಮೊದಲ ವಾರದಲ್ಲಿ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಮುಖ್ಯಮಂತ್ರಿ ಕೆಡಿಪಿ ಸಭೆಗೆ ಮುನ್ನ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿ ವಿವರ ಪಡೆದುಕೊಳ್ಳಿ, ಇಲಾಖಾವಾರು ಬಜೆಟ್‌ ಅನುದಾನ ಆಧರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಹೇಳಿದರು.

ಜಿಲ್ಲೆಯ ಯಾವ್ಯಾವ ತಾಲೂಕುಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದುಕೊಂಡ ಅವರು, ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗ‌ಳು ಬರಿದಾಗಿದ್ದು, ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಸಮರ್ಪಕ ನೀರು ಸರಬರಾಜು ಮಾಡುವ ಜತೆಗೆ ಬೋರ್‌ವೆಲ್‌ಗ‌ಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಮಾತನಾಡಿ, ಗ್ರಾಮಲೆಕ್ಕಿಗರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಳ್ಳಿಗಳಿಗೆ ಹೋಗದೆ ಕಚೇರಿಯಲ್ಲೇ ಕುಳಿತು ನೀರು ಸರಬರಾಜಿನ ದಾಖಲೆ ಸಿದ್ಧಪಡಿಸಿಬಿಡುತ್ತಾರೆ. ಹೀಗಾಗಿ ಟ್ಯಾಂಕರ್‌ ನೀರು ಸರಬರಾಜಾಗಿದ್ದಕ್ಕೆ ಆ ಗ್ರಾಮದ ಯಜಮಾನರಿಂದ ಸಹಿ ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತೆ ಎಂದರು.

Advertisement

ಸಚಿವ ಮಹದೇವಪ್ಪ, ಪ್ರತಿ ಹಳ್ಳಿಯಲ್ಲೂ ಟ್ಯಾಂಕರ್‌ ನೀರು ಸರಬರಾಜಿನ ಸಂಬಂಧ ಎಷ್ಟು ಟ್ರಿಪ್‌ ಟ್ಯಾಂಕರ್‌ ಬರಬೇಕು ಎಂಬ ಬಗ್ಗೆ ಫ‌ಲಕಗಳನ್ನು ಅಳವಡಿಸುವಂತೆ ಹೇಳಿದರು.
ಮೈಸೂರು ಮಹಾ ನಗರಪಾಲಿಕೆಯ 65 ವಾರ್ಡ್‌ಗಳ ಪೈಕಿ 56 ವಾರ್ಡ್‌ಗಳಿಗೆ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನುಳಿದ ವಾರ್ಡ್‌ಗಳಿಗೆ 22 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಿರುವುದರಿಂದ ದುರ್ಬಳಕೆ ತಡೆ ಸಾಧ್ಯವಾಗಿದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪ್ರಸಾದ ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 27 ಮೇವು ಬ್ಯಾಂಕ್‌ ತೆರೆಯಲಾಗಿದ್ದು, 1330 ಟನ್‌ ಮೇವು ಖರೀದಿಸಲಾಗಿದ್ದು, ಈವರೆಗೆ 31 ಸಾವಿರ ರೈತರಿಗೆ 978.51 ಟನ್‌ ಮೇವು ಮಾರಾಟ ಮಾಡಲಾಗಿದೆ. ಇನ್ನೂ 351 ಟನ್‌ ಮೇವು ದಾಸ್ತಾನಿದೆ. ಕಳೆದ 15 ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಹಸಿರು ಚಿಗುರುತ್ತಿದ್ದು, ಜತೆಗೆ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ 36 ಸಾವಿರ ಮಿನಿಕಿಟ್‌ಗಳನ್ನು ಹಂಚಿಕೆ ಮಾಡಿರುವುದರಿಂದ ಮೇವಿನ ಕೊರತೆ ಎದುರಾಗುವುದಿಲ್ಲ ಎಂದರು.

ನರೇಗಾ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಕೆರೆ ಸಂಜೀವಿನಿ, ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಇನ್‌ಫ‌ುಟ್‌ ಸಬ್ಸಿಡಿ ವಿತರಣೆ, ಮುಂಗಾರು ಪೂರ್ವ ಬಿತ್ತನೆ, ರೈತರ ಆತ್ಮಹತ್ಯೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿಪರಿಶೀಲನೆ ನಡೆಸಿದರು. ಜಿಪಂ ಸಿಇಒ ಪಿ.ಶಿವಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಹುಣಸೂರು ಉಪ ವಿಭಾಗಾಧಿಕಾರಿ ಸೌಜನ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next