ಮಡಿಕೇರಿ: ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿಗೆ ಸಂಬಂಧಿಸಿದಂತೆ ದೊರೆಯುವ ಉಚಿತ ಕಾನೂನು ಸೇವೆಗಳ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಜಯಂತ್ ಪಟೇಲ್ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣ ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿಗೆ ಸಂಬಂಧಿಸಿದಂತೆ ಉಚಿತ ಸಲಹೆ, ಮಾರ್ಗದರ್ಶನ ದೊರೆಯಲಿದೆ. ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಈ ಸಂಬಂಧ ನಾಮಫಲಕಗಳನ್ನು ಅಳವಡಿಸಬೇಕು. ಲೋಕಾದಲತ್ ಹಾಗೂ ಸಂಧಾನದ ಮೂಲಕ ಹೆಚ್ಚಿನ ಪ್ರಕರಣ ಇತ್ಯರ್ಥ ಪಡಿಸಬೇಕಿದೆ. ಆ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಇನ್ನಷ್ಟು ಕಾರ್ಯಕ್ರಮ ಆಯೋಜಿಸುವಂತೆ ಜಯಂತ್ ಪಟೇಲ್ ಹೇಳಿದರು.
ಬಂಧಿತರ ಕುಂದುಕೊರತೆ ವಿಚಾರಣೆ ಕಡ್ಡಾಯ ಜಿಲ್ಲೆಯ ಕಾರಾಗೃಹಗಳಲ್ಲಿ ಇರುವ ಎಲ್ಲ ಆರೋಪಿಗಳಿಗೂ ವಿಶೇಷ ಕಾನೂನು ನೆರವು ಸೌಲಭ್ಯ ದೊರೆಯುವಂತಾಗಬೇಕು. ಆರೋಪಿ ಗಳಿಗೆ ವಕಾಲತು ವಹಿಸಲು ವಕೀಲರು ನಿಯೋಜ ನೆಗೊಂಡಿರಬೇಕು. ಪ್ಯಾನಲ್ ವಕೀಲರು ಕಡ್ಡಾಯವಾಗಿ ವಾರಕ್ಕೆ ಎರಡು ಬಾರಿ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿಗಳ ಕುಂದುಕೊರತೆ ವಿಚಾರಿಸಬೇಕು ಎಂದು ಜಯಂತ್ ಪಟೇಲ್ ತಿಳಿಸಿದರು.
ಕಾನೂನು ಅರೆಕಾಲಿಕ ಸ್ವಯಂ ಸೇವಕರು ಸಹ ಬಂಧಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ ಕಾನೂನು ಸೇವಾ ಕೇಂದ್ರದ ಸೇವೆಗಳು ದೊರೆಯುವಂತೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ದಾಖಲಾಗುವ ಹೆಚ್ಚಿನ ಪ್ರಕರಣಗಳ ಸಂಬಂಧ ಕಾನೂನು ಅರಿವಿನ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ನಾಮಫಲಕಗಳನ್ನು ಅಳಡಿಸಬೇಕು. ಭೂಮಿ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನುರಿತ ವಕೀಲರ ತಂಡವನ್ನು ರಚಿಸಿ ಜನರಿಗೆ ಕಾನೂನಿಗೆ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.