ಮಸ್ಕಿ: ಬಿಜೆಪಿ ಸರಕಾರ ರಚನೆಗೆ ನೆರವಾದ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಮುಖಂಡ ರವಿಗೌಡ ಪಾಟೀಲ್ ಹೇಳಿದರು.
ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಬಹುಮತ ಕೊರತೆ ಇದ್ದಾಗ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಮೊದಲಿಗರು ಪ್ರತಾಪಗೌಡ ಪಾಟೀಲ್‌ರು. ಭರವಸೆಯಂತೆ 17 ಜನ ಶಾಸಕರ ಜತೆಗೂಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ದುರಾದೃಷ್ಟ ಎನ್ನುವಂತೆ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಈ ಹಿಂದೆ ಬಿಜೆಪಿ ವರಿಷ್ಠರು ಪ್ರತಾಪಗೌಡ ಪಾಟೀಲ್ ಅವರಿಗೆ ಮಾತು ನೀಡಿದಂತೆ ಈಗ ಖಾಲಿಯಾದ ಎಂಎಲ್ಸಿ ಸ್ಥಾನಕ್ಕೆ ಟಿಕೆಟ್ ನೀಡಿ ಪ್ರತಾಪಗೌಡ ಪಾಟೀಲ್ ಅವರನ್ನು ಪರಿಷತ್‌ಗೆ ಕಳುಹಿಸಬೇಕು. ಬಿಜೆಪಿ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡಿ ಪ್ರತಾಪಗೌಡ ಪಾಟೀಲರು ಮಾಡಿದ ತ್ಯಾಗಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹೈಕಮಾಂಡ್ ತೀರ್ಮಾನ
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಎಂಎಲ್ಸಿ ಟಿಕೆಟ್ ನೀಡುವ ಮೂಲಕ ಅವರನ್ನು ಪರಿಷತ್‌ಗೆ ಕಳುಹಿಸಿದರೆ ಮುಂದಿನ ವಿಧಾನ ಸಭೆ ಚುನಾವಣೆ ವೇಳೆಗೆ ಯಾರನ್ನು ಅಭ್ಯರ್ಥಿ ಎಂದು ಘೋಷಿಸುವ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟದ್ದು. ಪ್ರತಾಪಗೌಡ ಪಾಟೀಲ್ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡಬೇಕು ಎನ್ನುವ ಒತ್ತಾಯವಾಗಿದ್ದು, ಈ ಬಗ್ಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರ ಬಳಿ ಒತ್ತಡ ಹೇರಲು ಬೆಂಗಳೂರಿಗೆ ನಿಯೋಗ ತೆರಳುವುದಾಗಿ ರವಿಗೌಡ ಪಾಟೀಲ್ ಹೇಳಿದರು.
ಪುರಸಭೆ ಸದಸ್ಯರಾದ ಮಲ್ಲಣ್ಣ ಬ್ಯಾಳಿ, ಚೇತನ ಪಾಟೀಲ್, ಮಲ್ಲಯ್ಯ ಅಂಬಾಡಿ, ಶರಣಬಸವ ಸೊಪ್ಪಿಮಠ, ಭರತಶೇಠ, ಮಂಜುನಾಥ ನಂದ್ಯಾಳ, ರಮೇಶ ಗುಡಿಸಲಿ, ಡಾ| ಸಂತೋಷ, ಬಸವರಾಜ ಬುಕ್ಕಣ್ಣ ಇರರಿದ್ದರು.