ವಿಧಾನಪರಿಷತ್ :ರಾಜ್ಯದಲ್ಲಿ ಅರ್ಜಿ ಹಾಕಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶಾಸಕರಿಗೆ ಕೈ ಮುಗಿದು ಬೇಡಿಕೊಂಡ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಅಪ್ಪಾಜಿಗೌಡರ ಪರವಾಗಿ ರಮೇಶ್‌ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಶಾಸಕರಿಗೆ ಹಲವಾರು ಬಾರಿ ಕೇಳಿಕೊಂಡರೂ ಸಭೆ ನಡೆಸುತ್ತಿಲ್ಲ. ತಹಸೀಲ್ದಾರ್‌ಗಳಿಗೆ ಸಭೆ ಕರೆಯುವ ಅಧಿಕಾರ ಇದ್ದರೂ, ಶಾಸಕರು ಸಭೆ ನಡೆಸದಂತೆ ಅವರಿಗೆ ಬೆದರಿಕೆ ಹಾಕುತ್ತಾರೆ. ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗದಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಿಗೆ ಕಮಿಷನ್ ದೊರೆಯದ ಕಾರಣ ಅವರು ಬಗರ್ ಹುಕುಂ ಸಭೆ ಕರೆಯುವುದಿಲ್ಲ. ಅವರ ಜೊತೆಗೆ ವಿಧಾನ ಪರಿಷತ್ ಸದಸ್ಯರನ್ನೂ ಸಹ ಅಧ್ಯಕ್ಷರನ್ನಾಗಿ ಸೇರ್ಪಡೆ ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ಶಾಸಕರ ಅಧ್ಯಕ್ಷತೆಯ ಸಮಿತಿ ರಚಿಸಲು ಈಗಾಗಲೇ ಕಾನೂನು ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯರನ್ನು ಸಮಿತಿಗೆ ಸೇರಿಸಲು ಮತ್ತೆ ಕಾನೂನು ತಿದ್ದುಪಡಿ ಮಾಡಬೇಕಾಗುತ್ತದೆ. ಅದು ಸುಲಭವಾಗಿ ಆಗುವುದಿಲ್ಲ ಎಂದರು.
ಆಗ ಈಶ್ವರಪ್ಪ, ಹಾಗಿದ್ದರೆ ಈ ಸರ್ಕಾರದ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗುವುದಿಲ್ಲ ಎಂದು ಹೇಳಿ ಬಿಡಿ ಎಂದರು. ಅದಕ್ಕೆ, ಕಾಗೋಡು ತಿಮ್ಮಪ್ಪ ಅವರು, ಆ ರೀತಿ ಆಗಲು ಬಿಡುವುದಿಲ್ಲ ಎಂದು ಹೇಳಿದರು.