ಲಿಂಗಸುಗೂರು: ತೆಲಂಗಾಣ ಸರ್ಕಾರದ ಮಾದರಿಯಲ್ಲಿ ರಾಜ್ಯದ ಕಲಾವಿದರಿಗೆ 10 ಸಾವಿರ ರೂ. ಮಾಸಾಶನ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಸೂನಾರೆ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗಿನ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ಕಲೆ ಹಾಗೂ ಕಲಾವಿದರ ಬಗ್ಗೆ ಮಲತಾಯಿ ಧೋರಣೆ ನೀತಿ ಅನುಸರಿಸಿದ್ದರಿಂದ ಈ ಭಾಗದ ಕಲೆ ಅವನತಿ ಹಾದಿಯತ್ತ ಸಾಗುತ್ತಿದೆ. ಕಲಾವಿದರ ಬದುಕು ಕೂಡಾ ಸಂಕಷ್ಟದಲ್ಲಿದೆ. ಸರ್ಕಾರದಿಂದ ನಡೆಯುವ ಉತ್ಸವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶಗಳು ನೀಡುತ್ತಿಲ್ಲ. ಬದಲಾಗಿ ಬೇರೆ ರಾಜ್ಯದಿಂದ ಕಲಾವಿದರನ್ನು ಕರೆಸುತ್ತಿದ್ದಾರೆ. ಇದರಿಂದ ಇಲ್ಲಿನ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಈ ಭಾಗದ ಕಲೆ ಹಾಗೂ ಕಲಾವಿದರನ್ನು ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರದಿಂದ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ 24 ಟ್ರಸ್ಟ್, ಪ್ರತಿಷ್ಠಾನಗಳನ್ನು ನಡೆಸಲಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಟ್ರಸ್ಟ್ ಕೂಡಾ ಇಲ್ಲ. 7 ಜಿಲ್ಲೆಗಳಲ್ಲಿ ಹಿರಿಯ ಕಲಾವಿದರ ಹೆಸರಲ್ಲಿ ಟ್ರಸ್ಟ್ ರಚನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಬೇಕು. ತೆಲಂಗಾಣ ಮಾದರಿಯಲ್ಲಿ ಕಲಾವಿದರಿಗೆ 10 ಸಾವಿರ ರೂ. ಮಾಸಾಶನ ನೀಡಬೇಕು. ಆಂಧ್ರಪ್ರದೇಶ ಮಾದರಿಯಲ್ಲಿ ಕಲಾವಿದರ ಸಮೀಕ್ಷೆ ನಡೆಯಬೇಕು.
ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನವಿ ಮಾಡಿದ್ದರಿಂದ ಕಲಾವಿದರಿಗೆ ಗುರುತಿನ ಚೀಟಿ ಹಾಗೂ ವೈದ್ಯಕೀಯ ವಿಮೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಸಾಂಸ್ಕೃತಿಕ ಅಭಿವೃದ್ಧಿಗಾಗಿ ಯಾವುದೇ ಕ್ರಿಯಾಯೋಜನೆ ಮಾಡಬೇಕು. ಏಳು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ಹಾಗೂ ನಾಟಕೋತ್ಸವ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಕಲಾವಿದ ರಾಜಣ್ಣ ಜೇವರ್ಗಿ, ಒಕ್ಕೂಟದ ತಾಲೂಕು ಅಧ್ಯಕ್ಷ ಮಂಜುನಾಥ ಗುಡದನಾಳ, ಪರಶುರಾಮ ಇದ್ದರು.