Advertisement

ಕ್ಷೇತ್ರದ ಅಭಿವೃದ್ಧಿಗೆ ಒತ್ತು

03:34 PM Oct 18, 2018 | Team Udayavani |

ಬಾಗಲಕೋಟೆ: ಬಾಗಲಕೋಟೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ವೈಜ್ಞಾನಿಕ ನಾಗರಿಕ ಸೌಕರ್ಯ ಕಲ್ಪಿಸಬೇಕೆಂಬುದು ನನ್ನ ಆಶಯ. ರಾಜ್ಯದ ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದರಿಂದ ನಿಗದಿತ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಆರೋಪಿಸಿದರು. ನಗರದ ಮಿರ್ಜಿ ಗಲ್ಲಿಯ ನಾಡಹಬ್ಬ ಆಚರಣಾ ಸಮಿತಿ ಆಯೋಜಿಸಿದ್ದ ನಗರಸಭೆ ಸದಸ್ಯರ, ಹಿರಿಯ ನಾಗರಿಕರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ವಿದ್ಯಾಗಿರಿ, ನವನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆ ವಿಳಂಬವಾಗುತ್ತಿದೆ. ಹೆರಕಲ್ಲ ನೀರು ಸರಬರಾಜು ಯೋಜನೆ ಕುಂಠಿತಗೊಂಡಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ಮಂಜೂರಿಯಾಗಿದ್ದ ಯೋಜನೆಗಳೇ ಇನ್ನೂ ಅನುಷ್ಠಾನದ ಹಂತದಲ್ಲಿವೆ. ಮತ್ತೆ ನಾನು ಶಾಸಕನಾಗಿ ಆಯ್ಕೆಯಾಗಿ ಬಂದಾಗಲೂ ಇನ್ನೂ ಅವು ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿದರು. ನವರಾತ್ರಿ ಉತ್ಸವ ಕ್ಷೇತ್ರದ ಅಭಿವೃದ್ಧಿಗೆ ದಿಕ್ಸೂಚಿಯಾಗಲಿ. ಸಮ್ಮಿಶ್ರ ಸರ್ಕಾರ ಹೋಗಿ ಯಡಿಯೂರಪ್ಪನವರ ನಾಯಕತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಅಭಿವೃದ್ಧಿಗೆ ಚೈತನ್ಯ ಸಿಗಲಿ ಎಂದರು.

ಸಮಾರಂಭದಲ್ಲಿ ಸುಮಾರು 25ಕ್ಕೂ ಹೆಚ್ಚು ನಗರಸಭೆ ಸದಸ್ಯರನ್ನು ಅಭಿನಂದಿಸಲಾಯಿತು. ಪ್ರತಿ ಕ್ಷೇತ್ರದಲ್ಲಿ ಸದಸ್ಯರು ಆಗಬೇಕಾಗಿರುವ ರಚನಾತ್ಮಕ ಕಾರ್ಯ ಗುರುತಿಸಿ ನಗರಸಭೆ ಮೂಲಕ ಜಾರಿಗೆ ತರಲು ಸಂಘಟಿತ ಪ್ರಯತ್ನ ಮಾಡೋಣ ಎಂದು ಹೇಳಿದರು. ಖೊಟ್ಟಿ ಪೈಸೆ ಚಿತ್ರದ ನಿರ್ಮಾಪಕಿ ಗೀತಾ ಗಿರಿಜಾ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 96ರಷ್ಟು ಅಂಕ ಪಡೆದ ದಿವ್ಯಾ ಪೂಜಾರ, ಎಂಟು ಜನ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಪ್ಲಾಸ್ಟಿಕ್‌ ಚೀಲ ಬಳಕೆ ನಿಷೇಧವಾಗಿದ್ದರೂ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ನಾಗರಿಕ ಪ್ರಜ್ಞೆ ಮೂಡಿಸಲು ನಾಡಹಬ್ಬ ಆಚರಣಾ ಸಮಿತಿ ಪ್ರತಿ ಮನೆಗೆ ಎರಡು ಕೈಚೀಲ ನೀಡಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಬಳಕೆ ನಿಷೇಧಿ ಸಲು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ನಗರಸಭೆ ಮಾಜಿ ಉಪಾಧ್ಯಕ್ಷ ಜಯಂತ ಕುರಂದವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಗಿರಿ ಹಾಗೂ ನವನಗರಕ್ಕೆ ಸೀಮಿತವಾಗಿರುವ ನಿರಂತರ ನೀರು ಪೂರೈಕೆ ಯೋಜನೆ ಬಾಗಲಕೋಟೆ ಮುಳುಗಡೆಯಾಗದ ನಗರಕ್ಕೂ ವಿಸ್ತರಿಸಬೇಕು, ಕಾರಿಹಳ್ಳದ ಕ್ವಾರಿ ನೀರು ಇಲ್ಲಿ ಸರಬರಾಜು ಮಾಡಿದರೆ ಬೋರ್‌ವೆಲ್ ಗಳ ಬಳಕೆ ನಿಲ್ಲಿಸಿ ಶುದ್ಧ ನೀರು ಬಳಕೆಗೆ ಅವಕಾಶವಾಗುತ್ತದೆ. ಇದರಿಂದ ನಗರಸಭೆಗೆ ಕನಿಷ್ಠ ಮಾಸಿಕ 5 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಹೇಳಿದರು. ಸಮಿತಿ ಅಧ್ಯಕ್ಷ  ಶ್ರೀನಿವಾಸ ಮನಗೂಳಿ, ಕಾರ್ಯದರ್ಶಿ ದೀಪಕ ಹೆಬ್ಟಾರೆ ವೇದಿಕೆಯಲ್ಲಿದ್ದರು. ಸುಷ್ಮಾ ಕುಂಟೋಜಿ ಪ್ರಾರ್ಥಿಸಿದರು. ಭಾಸ್ಕರ ಮನಗೂಳಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next