ಬೆಂಗಳೂರು: ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್‌ಗೆ ಗಾಂಧಿ ಜಯಂತಿ ಯಂದು ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರ ಕುರಿತು “ಉದಯವಾಣಿ’ ಪ್ರಕಟಿಸಿದ ವಿಶೇಷ ವರದಿ ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.
ಸೆ. 12ರಂದು “ಈ ವರ್ಷವೂ ಗ್ರಾ.ಪಂ.ಗಳಿಗೆ ಗಾಂಧಿ ಪುರಸ್ಕಾರ ಕನಸು?’ ಎಂಬ ಶೀರ್ಷಿಕೆಯಡಿ “ಉದಯ ವಾಣಿ’ಯು ಮುಖಪುಟ ದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ, ಗ್ರಾಮ ಪಂಚಾಯತ್‌ಗಳ ಆರ್ಥಿಕ ಮತ್ತು ಆಡಳಿತಾತ್ಮಕ ಸಾಧನೆ ಆಧರಿಸಿ ಅವುಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತೀ ತಾಲೂಕಿನ ಒಂದು ಗ್ರಾ.ಪಂ. ಗೆ ಮಹಾತ್ಮ ಗಾಂಧೀಜಿ ಜಯಂತಿಯಾದ ಅಕ್ಟೋಬರ್ 2ರಂದು ಗಾಂಧಿ ಪುರ ಸ್ಕಾರ ನೀಡಲಾಗುತ್ತಿದೆ. ಆದರೆ 2019-20 ಮತ್ತು 2020-21ನೇ ಸಾಲಿ ನಲ್ಲಿ ಪಂಚಾಯತ್‌ಗಳನ್ನು ಆಯ್ಕೆ ಮಾಡಿ ದ್ದರೂ ಕೊರೊನಾ ಕಾರಣದಿಂದ ಪ್ರಶಸ್ತಿ ಪುರಸ್ಕಾರ ನೀಡಿಲ್ಲ.
ಈ ಬಗ್ಗೆ “ಉದಯವಾಣಿ’ ಬೆಳಕುಚೆಲ್ಲಿದೆ. ಸ್ಥಗಿತಗೊಂಡ ಗಾಂಧಿ ಪುರಸ್ಕಾರ ಯೋಜನೆಯನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷದ ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾರಂಭಗೊಂಡಿಲ್ಲ. ಆರ್ಥಿಕ ಮತ್ತು ಆಡಳಿತ ಮಾನದಂಡಗಳ ಆಧಾರದ ಮೇಲೆ ಗ್ರಾ.ಪಂ. ಗಳ ಸಾಧನೆಯನ್ನು ಅಳತೆಗೋಲನ್ನಾಗಿ ಇಟ್ಟುಕೊಂಡು ಗಾಂಧಿ ಪುರಸ್ಕಾರ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ವರ್ಷ ನೀಡುವ ಯೋಜನೆಯನ್ನು 2019-20 ರಿಂದ ನಿಲ್ಲಿಸಲಾಗಿದೆ. ರಾಜ್ಯವು ಅಧಿಕಾರ ವಿಕೇಂದ್ರೀಕರಣದಲ್ಲಿ ಮುಂಚೂಣಿ ಯಲ್ಲಿದ್ದು, 24 ಇಲಾಖೆಗಳ 29 ಅಭಿವೃದ್ಧಿ ವಿಷಯಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿವೆ. ಇದರ ಜತೆಗೆ ಮೂಲ ಸೇವೆಗಳ ನಿರ್ವಹಣೆ, ಪೌರಸೇವೆಗಳ ಹೊಣೆ ಅವುಗಳ ಮೇಲಿದೆ. ಪುರಸ್ಕಾರವು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆ ಆಗಲಿದೆ ಎಂದು ಒತ್ತಾಯಿಸಿದರು.