ಯಲಬುರ್ಗಾ: ತಾಲೂಕಿನ ಜನತೆ ಲಾಕ್ ಡೌನ್ ನಿಯಮ ಪಾಲಿಸಬೇಕು. ಬಡ ಜನತೆ ಲಾಕ್‌ಡೌನ್ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ವೈಯಕ್ತಿಕವಾಗಿ ಒಂದು ಸಾವಿರ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಅವುಗಳನ್ನು ತಾಲೂಕಾಡಳಿತ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಸುಮಾರು ಒಂದು ಸಾವಿರ ಅಗತ್ಯ ದಿನಸಿ ಆಹಾರ ಧಾನ್ಯ ಕಿಟ್‌ಗಳನ್ನು ತಾಲೂಕಾಡಳಿತಕ್ಕೆ ನೀಡಿ ಅವರು ಮಾತನಾಡಿದರು. ಸರಕಾರದಿಂದ ಯಾವ ಸೌಲಭ್ಯ ಪಡೆಯದೆ ವಂಚಿತರಾದ ಕಡು ಬಡವರನ್ನು ಗುರುತಿಸಿ ಆಹಾರ ಧಾನ್ಯ ಕಿಟ್‌ಗಳನ್ನು ಜನರ ಮನೆಗೆ ಬಾಗಿಲಿಗೆ ತಲುಪಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ತಾಲೂಕಾಡಳಿತ ಸರ್ವೇ ನಡೆಸಿ ಬಡವರ ಪಟ್ಟಿ ಸಿದ್ದಪಡಿಸಿದೆ. ಅಂತಹ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ದಿನಸಿ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಬೇಕು. ಅನ್ಯರ ಪಾಲಾಗದಂತೆ ಕಡು ಬಡವರಿಗೆ ಮುಟ್ಟಿಸುವ ಕಾರ್ಯವನ್ನು ತಾಲೂಕಾಡಳಿತ ಮಾಡಬೇಕು. ತಾಲೂಕಿನಲ್ಲಿ ಹಲವಾರು ಸಂಘ, ಸಂಸ್ಥೆಗಳು, ದಾನಿಗಳು ಆಹಾರ ಧಾನ್ಯಗಳ ಕಿಟ್ ಸೇರಿದಂತೆ ಯಾವುದಾದರೂ ನೆರವು ನೀಡುವ ಇಚ್ಚೆ ಹೊಂದಿದ್ದರೆ ಕೂಡಲೇ ತಾಲೂಕಾಡಳಿತಕ್ಕೆ ತಲುಪಿಸಬೇಕು ಎಂದರು. ಬಸವಲಿಂಗಪ್ಪ ಭೂತೆ, ಸಿ.ಎಚ್ ಪೊಲೀಸಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ವೀರಣ್ಣ ಹುಬ್ಬಳ್ಳಿ, ಈರಪ್ಪ ಕುಡಗುಂಟಿ, ಶರಣಪ್ಪ ಈಳಿಗೇರ, ಹಂಚ್ಯಾಳಪ್ಪ ತಳವಾರ, ಸಿದ್ದರಾಮೇಶ್ವರ ಬೇಲೇರಿ, ಷಣ್ಮುಖಪ್ಪ ರಾಂಪೂರ, ಸುರೇಶಗೌಡ ಶಿವನಗೌಡ್ರ, ಶಂಭು ಜೋಳದ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಹಶೀಲ್ದಾರಗಳಾದ ಶ್ರೀಶೈಲ್ ತಳವಾರ, ಕಿರಣಕುಮಾರ, ಇಒ ಜಯರಾಂ ಚವ್ಹಾಣ, ಮಹೇಶ ನಿಡಶೇಷಿ, ಎಂ.ನಾಗರಡ್ಡಿ, ಹನುಮಂತಪ್ಪ ತಳವಾರ ಇದ್ದರು.