ಮೈಸೂರು: ಹೆಣ್ಣು ಕರುಗಳೇ ಹುಟ್ಟುವ ರೀತಿ ಹೆಣ್ಣು ಭ್ರೂಣದ ಇಂಜೆಕ್ಷನ್ ತಯಾರು ಮಾಡಲಾಗಿದ್ದು, ರೈತರು ತಮ್ಮ ಹಸುಗಳಿಗೆ ಈ ಇಂಜೆಕ್ಷನ್ ಕೊಡಿಸಬೇಕು ಎಂದು ಪಶುಸಂಗೋಪನ ಹಾಗೂ ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ವರುಣ ವಿಧಾನಸಭಾ ಕ್ಷೇತ್ರದ ಸರಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಪಶುಸಖೀಯರಿಗೆ ಮಂಗಳವಾರ ನಡೆದ ಎ-ಹೆಲ್ಪ್ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಸುಗಳಿಗೆ ಹೆಣ್ಣು ಕರುಗಳು ಜನಿಸುವ ರೀತಿ ಈಗ ಹೆಣ್ಣು ಭ್ರೂಣವನ್ನು ತಯಾರಿಸಲಾಗಿದೆ. ಹಸುಗಳಿಗೆ ಹೆಣ್ಣು ಭ್ರೂಣದ ಈ ಇಂಜೆಕ್ಷನ್ ಕೊಡಿಸಿದರೆ ಶೇ. 90ರಷ್ಟು ಹೆಣ್ಣು ಕರುಗಳೇ ಜನಿಸುತ್ತದೆ. ಈ ಇಂಜೆಕ್ಷನ್‌ಗೆ 650 ರೂ. ಆಗುತ್ತದೆ. ಸರಕಾರ 425 ರೂ. ಸಬ್ಸಿಡಿ ನೀಡುತ್ತದೆ. ಉಳಿದ ಹಣವನ್ನು ರೈತರು ನೀಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.
ಹುದ್ದೆ ಭರ್ತಿಗೆ ಮನವಿ
ಪಶು ಸಂಗೋಪನ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ 18 ಸಾವಿರ ನೌಕರರಿರಬೇಕು. ಆದರೆ, ಈಗ ಒಂಭತ್ತು ಸಾವಿರ ನೌಕರರಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಶು ವೈದ್ಯರ ಕೊರತೆ ಇದೆ. ಈ ಹುದ್ದೆಗಳನ್ನೂ ಭರ್ತಿ ಮಾಡಬೇಕೆಂದು ಸಚಿವ ವೆಂಕಟೇಶ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂವರು ಕಿರಿಯ ಪಶು ವೈದ್ಯಕೀಯ ಇನ್‌ಸ್ಪೆಕ್ಟರ್‌ಗಳಿಗೆ ಸಾಂಕೇತಿಕವಾಗಿ ನೇಮಕಾತಿ ಪತ್ರವನ್ನು ನೀಡಿದರು.