Advertisement

ದಲಿತರ ಯೋಜನೆಗಳಿಗೆ ಕಾಯಕಲ್ಪ ನೀಡಿ: ಎ.ಮುನಿಯಪ್ಪ

10:48 AM Sep 08, 2017 | |

ಕಲಬುರಗಿ: ಜಿಲ್ಲೆಯಲ್ಲಿ ಸರಕಾರ ದಲಿತರಿಗಾಗಿ ಸಮಗ್ರ ವಿಕಾಸಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಜಾರಿಗೆ ತಂದು ಕಾಯಕಲ್ಪ ನೀಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಸೂಚಿಸಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಡಾ| ಬಿ.ಆರ್‌. ಅಂಬೇಡ್ಕರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸರಕಾರ ಹಲವಾರು ಕಾರ್ಯಕ್ರಮ ರೂಪಿಸಿದೆ. ಸಮಯಕ್ಕೆ ಅನುಗುಣವಾಗಿ ಅವು ಜಾರಿಗೆ ಬರುವುದಲ್ಲದೆ, ಅದರ ಸಂಪೂರ್ಣ ಲಾಭವನ್ನು ಆಯಾ ವರ್ಗಗಳಿಗೆ ದೊರಕಿಸಿ ಕೊಡುವಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು. 

ಸಮಾಜ ಕಲ್ಯಾಣ ಇಲಾಖೆ, ಡಾ| ಬಿ.ಆರ್‌. ಅಂಬೇಡ್ಕರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಿಗೆ ನೀಡಿರುವ ಎಸ್‌.ಸಿ.ಪಿ. ಮತ್ತು ಟಿ.ಎಸ್‌ .ಪಿ. ಅನುದಾನವನ್ನು ಸಂಪೂರ್ಣ ಬಳಸಿಕೊಂಡು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಜೇವರ್ಗಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ದಲಿತರು ಕುಡಿಯುವ ನೀರಿಗಾಗಿ ಬಳಸುವ ಬಾವಿಯಲ್ಲಿ ವಿಷ ಬೆರೆಸಿರುವ ಪ್ರಕರಣ ನಡೆದು ನಾಲ್ಕೆಐದು ದಿನಗಳಾದರೂ ಯಾರ ಮೆಲೂ ಕ್ರಮ ಕೈಗೊಂಡಿಲ್ಲ. ಇದು ಗ್ರಾಮ ಪಂಚಾಯಿತಿ ಮತ್ತು
ಪೊಲೀಸ್‌ ಇಲಾಖೆ ಬೇಜವಾಬ್ದಾರಿತನ. ಈ ಹಿಂದೆ ನಡೆದ ಘಟನೆಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ತಾಕೀತು ಮಾಡಿದರು. ಚನ್ನೂರ ಗ್ರಾಮದಲ್ಲಿ ದಲಿತರು ಕುಡಿಯುವ ನೀರಿಗೆ ಬಳಸುವ ಬಾವಿಯಿರುವ ಹೊಲದ ಮಾಲೀಕರು ಬಾವಿಯಿಂದ ನೀರು ತೆಗೆದು ಬಟ್ಟೆ ಒಗೆಯುವುದು, ಜಾನುವಾರು ತೊಳೆಯುವುದರಿಂದ ಬೇರೆ ಭೂ ಪ್ರದೇಶ
ಹಾಳಾಗುತ್ತಿದೆ. ಅದನ್ನು ತಡೆಯಬೇಕು ಅಥವಾ ಅದಕ್ಕೆ ಪರ್ಯಾಯ ಭೂಮಿ ನೀಡಲು ಕೋರಿದ್ದಾರೆ. ಸ್ಮಶಾನಕ್ಕಾಗಿ ಬಳಸುತ್ತಿರುವ ಹೊಲದ ಮಾಲೀಕರು ಸಹಿತ ಸ್ಮಶಾನಕ್ಕಾಗಿ ಭೂಮಿ ನೀಡಲು ಸಿದ್ಧರಿದ್ದಾರೆ. ಈ ಪ್ರಕರಣಗಳನ್ನು ಪರಿಶೀಲಿಸಿ ಭೂಮಿ ಖರೀದಿಸಿ ಕ್ರಮ ಜರುಗಿಸುವಂತೆ ತಿಳಿಸಿದರು.

Advertisement

ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನೌಕರಿ ನೀಡಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 12 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಕೇವಲ ಮೂರು ಪ್ರಕರಣಗಳಲ್ಲಿ ನೌಕರಿ ನೀಡಲಾಗಿದೆ. ಇನ್ನುಳಿದ ಯೋಜನೆಗಳ ಪ್ರಗತಿ ಕುಂಠಿತವಾಗಿದೆ ಎಂದ ಅವರು, ಅಟ್ರಾಸಿಟಿಯಿಂದ ಸಂಬಂಧಗಳು ಕೆಡುತ್ತವೆ. ದಲಿತರು ಅಟ್ರಾಸಿಟಿ ಹಕ್ಕನ್ನು ಸಣ್ಣ ಪುಟ್ಟ ವಿಚಾರಗಳಿಗೆ ಬಳಸಿಕೊಳ್ಳಬಾರದು. ಇದನ್ನು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕೆಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಜೇವರ್ಗಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್‌.ಐ.ಆರ್‌. ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಈಗಾಗಲೇ ವಿಷ ಬೆರೆಸಿದ ಬಾವಿಯನ್ನು ಮೂರು ಬಾರಿ ಸ್ವತ್ಛಗೊಳಿಸಲಾಗಿದೆ. ಸ್ಮಶಾನ ಭೂಮಿಗೆ ಸಂಬಂ ಧಿಸಿದಂತೆ ಸದ್ಯ ಸ್ಮಶಾನಕ್ಕಾಗಿ
ಬಳಸುತ್ತಿರುವ ಭೂಮಿಯನ್ನು ಮಾಲೀಕರು ನೀಡಲು ಒಪ್ಪಿದಲ್ಲಿ ಅದನ್ನು ಖರೀದಿಸಿ ಸ್ಮಶಾನ ಭೂಮಿಯಾಗಿ ಅಭಿವೃದ್ಧಿಪಡಿ ಸಲಾಗುವುದು. ಯಾವುದೇ ಗ್ರಾಮದಲ್ಲಿ ದಲಿತರಿಗಾಗಿ ಸ್ಮಶಾನ ಇಲ್ಲದಿದ್ದಲ್ಲಿ ಭೂಮಿಯನ್ನು ನೇರವಾಗಿ ಖರೀದಿಸಲು ಅವಕಾಶಗಳಿವೆ ಎಂದು ಹೇಳಿದರು.

ಆಯೋಗದ ಸದಸ್ಯ ಆನಂದ ಎಲ್‌. ಸಂದ್ರಿಮನಿ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಂದೇನವಾಜ್‌, ಜೇವರ್ಗಿ ತಹಶೀಲ್ದಾರ ಯಲ್ಲಪ್ಪ, ಜೇವರ್ಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಮಾನೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next