Advertisement

ಮಕ್ಕಳಿಗೆ ಕೊಡಗಿನ ಮಹಿಮೆ ತಿಳಿಸಿ: ಸುನಿಲ್‌

03:11 PM Dec 28, 2017 | Team Udayavani |

ಸೋಮವಾರಪೇಟೆ: ಕೊಡಗಿನ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ವೀರ ಸೈನಿಕರ ಪರಾಕ್ರಮ ಹಾಗೂ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಪೋಷಕರು ತಿಳಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಹೇಳಿದರು.

Advertisement

    ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಸೋಮವಾರ ನಡೆದ ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಎಲ್ಲ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಐಎಎಸ್‌, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಪೋ›ತ್ಸಾಹಿಸಬೇಕು. ಕೊಡಗಿನಲ್ಲಿ ನೆಲೆಸಿರುವ ಎಲ್ಲರೂ ಇಲ್ಲಿನ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಬಾರದು. ಆದಾಯ ಕಡಿಮೆ ಇದ್ದರೂ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಉಳಿಸಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕೆಂದರು.

    ಕೊಡಗಿನ ಆಸ್ತಿಯನ್ನು ಹೊರ ಜಿಲ್ಲೆಯವರು ಖರೀದಿ ಮಾಡುತ್ತಿರುವುದರಿಂದ ಇಲ್ಲಿನ ಸಂಸ್ಕೃತಿಯು ವಿನಾಶದತ್ತ ತೆರಳುವುದು ಖಂಡಿತ. ಕೃಷಿ ಭೂಮಿಯನ್ನು ಉಳಿಸಿಕೊಳ್ಳುವತ್ತ ಎಲ್ಲರೂ ಮುಂದಾಗಬೇಕೆಂದು ಇದೇ ಸಂದರ್ಭ ಸೋಮವಾರಪೇಟೆ ಕೊಡವ ಸಮಾಜದ ಅಭಿವೃದ್ಧಿಗೆ 2.5ಲಕ್ಷ ಅನುದಾನ ಹಾಗೂ ಸಮಾಜದ ವಿದ್ಯಾ ನಿಧಿಗೆ ವೈಯಕ್ತಿಕವಾಗಿ ರೂ. 25 ಸಾವಿರ ಧನ ಸಹಾಯ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್‌ ಮಾತನಾಡಿ, ಕೊಡಗಿನಲ್ಲಿ ಕೊಡವರು ಅಲ್ಪಸಂಖ್ಯಾಕ‌ರಾಗುತ್ತಿದ್ದಾರೆ. ಇಲ್ಲಿನ ಮೂಲ ನಿವಾಸಿಗಳು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಪಟ್ಟಣದಲ್ಲಿ ಹೋಗಿ ನೆಲೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ. ಕೊಡವ ಜನಾಂಗಕ್ಕೆ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಕೊಡವ ಸಮಾಜಗಳು ಹಾಗೂ ಒಕ್ಕೂಟಗಳು ಒಗ್ಗಟ್ಟಿನಿಂದ ಹೋರಾಡಬೇಕು. ಕೊಡಗಿನಲ್ಲಿರುವ ಕೊಡವ ಸಂಘಟನೆಗಳ ಹೋರಾಟದ ಕೂಗು ರಾಷ್ಟ್ರಮಟ್ಟಕ್ಕೆ ಮುಟ್ಟುವಂತಾಗಬೇಕು. ಆಗ ಮಾತ್ರ ನಮ್ಮ ಸಮಸ್ಯೆಗಳು ಪರಿಹಾರವಾಗಲು ಸಾಧ್ಯ ಎಂದರು.

ಇದೇ ಸಂದರ್ಭ ಸಮಾಜದ ಹಿರಿಯ ಸದಸ್ಯರಾದ ಕೆ. ಅಯ್ಯಪ್ಪ ಮತ್ತು ಕ‌ಲ್ಲೇಂಗಡ ಅಪ್ಪಚ್ಚುರವರುಗಳನ್ನು ಸಮಾಜದ ವತಿಯಿಂದ ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಬಾಚಿನಾಡಂಡ ರೀಟಾ ಕುಶಾಲಪ್ಪ ಉಪಸ್ಥಿತರಿದ್ದರು.

Advertisement

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ತಾಂತ್ರಿಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಮಾಜದ ಸದಸ್ಯರ ಮಕ್ಕಳಿಗೆ ಪೋ›ತ್ಸಾಹ ಧನದ ಚೆಕ್‌ ವಿತರಿಸಲಾಯಿತು. ಗರ್ವಾಲೆಯ ಬೊಟ್ಲಪ್ಪ ಯುವಕ ಸಂಘದ ಬೊಳಕ್ಕಾಟ್‌, ಕೋಲಾಟ ಉಮ್ಮತ್ತಾಟ್‌, ಪರೆಯಕಳಿ ಹಾಗೂ ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next