Advertisement

“ಪಡಿತರ ಆಹಾರ ಪದಾರ್ಥ ಲಂಚನೀಡಿ ಖರೀದಿಸಬೇಕಿದೆ’

03:13 PM Feb 03, 2017 | Team Udayavani |

ರಾಮನಗರ: ನಗರದ ಯಾರಬ್‌ನಗರ, ಮೆಹಬೂಬನಗರ, ಟಿಪ್ಪುನಗರ ಮತ್ತು ಬೀಡಿ ಕಾಲೋನಿ ನಿವಾಸಿಗಳು ತಮಗೆ ಪಡಿತರ ಆಹಾರ ಪದಾರ್ಥಗಳು ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನಾ ಧರಣಿ ನಡೆಸಿದರು.

Advertisement

ನಗರದ ಮಿನಿ ವಿಧಾನಸೌಧದ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಸಿ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಲಂಚಕೊಡಬೇಕು: ಪ್ರತಿ ತಿಂಗಳು 10ನೇ ತಾರೀಖುನೊಳಗೆ ಪಡಿತರ ವಿತರಣೆಯಾಗಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಜನವರಿ ತಿಂಗಳ ಪಡಿತರ ಇದೀಗ ಕೊಡುತ್ತಿದ್ದಾರೆ. ಇದು ಮೊದಲನೇಲ್ಲ, ಹಲವಾರು ಬಾರಿ ಹೀಗಾಗಿದೆ. ಮೇಲಾಗಿ ಉಚಿತವಾಗಿ ವಿತರಿಸಬೇಕಾದ ಆಹಾರ ಪದಾರ್ಥಗಳಿಗೆ ಲಂಚಕೊಟ್ಟು ತೆಗೆದು ಕೊಳ್ಳಬೇಕಾದ ದುಃಸ್ಥಿತಿ ಒದಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಬೆಲೆ ಅಂಗಡಿಗಳ ಈ ವರ್ತನೆಯ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರಿದರೂ ಉಪಯೋಗವಾಗಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಜೊತೆ ಶಾಮೀಲಾಗಿ ತಮಗೆ ಆಹಾರ ಪದಾರ್ಥಗಳನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ನಿಗದಿ ಪಡಿಸಿದಷ್ಟು ಪಡಿತರ ವಿತರಿ ಸುವ ಬದಲು ಕಡಿಮೆ ವಿತರಿಸಲಾಗುತ್ತಿದೆ. ಕೆಲವರಿಗೆ ಪಡಿತರವನ್ನೇ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

ದೌರ್ಜನ್ಯ: ಇದಕ್ಕೆ ಪೂರಕವಾಗಿ ಯಾರಬ್‌ನಗರದ ನಿವಾಸಿ ಮೆಹಬೂಬ್‌ ಪಾಷ ಮಾತನಾಡಿ, ತಮ್ಮ ಕುಟುಂಬದಲ್ಲಿ 6 ಮಂದಿ ಇರುವುದಾಗಿ, ಪ್ರತಿ ಯೂನಿಟ್‌ಗೆ 3 ಕೆ.ಜಿ.ಯಂತೆ ಒಟ್ಟು 18 ಕೆ.ಜಿ. ಅಕ್ಕಿ ನೀಡಬೇಕಿತ್ತು. ಆದರೆ, ಕೇವಲ 8 ಕೆ.ಜಿ. ಅಕ್ಕಿಯನ್ನಷ್ಟೇ ನೀಡಿದ್ದಾರೆ ಅಳಲು ತೋಡಿಕಂಡರು. ಕಡುಬಡವರಾದ ತಮ್ಮನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಭಿಕ್ಷುಕರಂತೆ ನಡೆಸಿಕೊಳ್ಳುತ್ತಾರೆ. ನಿಗದಿಪಡಿಸಿದಷ್ಟು ಪಡಿತರ ವಿತರಿಸುವಂತೆ ಒತ್ತಾಯಿಸಿದರೆ ದೌರ್ಜನ್ಯ ಎಸಗುತ್ತಾರೆ, ಕೆಲವರು ಮಾಲೀಕರು ಆಹಾರ ಇಲಾಖೆಯ ಅಧಿಕಾರಿಗಳ ಸೂಚನೆ ಇದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದರು.

Advertisement

42 ರೂ ಬದಲಿಗೆ 310 ರೂ ಕೊಡಬೇಕು. ಇಲ್ಲದಿದ್ದರೆ ಪಡಿತರವನ್ನೇ ಕೊಡುವುದಿಲ್ಲ. ನ್ಯಾಯಬೆಲೆ ಅಂಗಡಿಗಳು ಶೋಷಣೆಯ ಕೇಂದ್ರಗಳಾಗಿವೆ. ಸರ್ಕಾರ ನೀಡುವ ಉಚಿತ ಪಡಿತರ ಪಡೆಯಲು 10 ರೂ ಕೊಟ್ಟು ಟೋಕನ್‌ ಪಡೆಯಬೇಕು. ನಂತರ ಕನಿಷ್ಠ ನಾಲ್ಕೈದು ದಿನಗಳು ನ್ಯಾಯಬೆಲೆ ಅಂಗಡಿಗೆ ಅಲೆಯಬೇಕು. ಬಳಿಕ ಅವರು ಕೇಳಿದಷ್ಟು ಹಣ ತೆತ್ತು, ನೀಡಿದಷ್ಟು ಪಡಿತರ ಪಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ಉನ್ನತಾಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸರ್ಕಾರ ನಿಗದಿಪಡಿಸಿದಷ್ಟು ಆಹಾರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಬಡವರನ್ನು ಶೋಷಿಸುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು. ತಪ್ಪಿದಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಅತೀಕ್‌ ಉಲ್ಲಾಖಾನ್‌, ಸೈಯದ್‌ ಅಲ್ತಾಫ್, ಅಬ್ದುಲ್‌ ಬಷೀರ್‌, ಜಬೀ, ಎಜಾಸ್‌ ಪಾಷ, ಅಬ್ದುಲ್‌ ಶುಕೂರ್‌, ಅಕºರ್‌ ಖಾನ್‌, ಬೀಬಿ ಹಾಜಿರಾ, ಅಸ್ಲಂ ಪಾಷ, ಅಮಾನುಲ್ಲಾಖಾನ್‌,  ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next