ತಿರುವನಂತಪುರಂ: ಕೇರಳದ ಮಣಪ್ಪುರಂ ಜಿಲ್ಲೆಯಲ್ಲಿ ಹೆಣ್ಣುಮಗುವಾದರೆ ಕುಟುಂಬಕ್ಕೆ ಖುಷಿಯಷ್ಟೇ ಅಲ್ಲ. ಸಂಪತ್ತನ್ನೂ ತರುತ್ತಾಳೆ! ಹೆಣ್ಣುಮಕ್ಕಳನ್ನು ತಾತ್ಸಾರದಿಂದ ನೋಡುವ ಈ ಭಾಗದಲ್ಲಿ ಇಲ್ಲಿನ ಮುನಿಸಿಪಲ್ ಕೌನ್ಸಿಲರ್ ಅಬ್ದುಲ್ ರಹೀಮ್ ಹೊಸದೊಂದು ಯೋಜನೆ ರೂಪಿಸಿದ್ದಾರೆ. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ತನ್ನ ವಾರ್ಡ್‌ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರೂ, ಒಂದು ಗ್ರಾಂ ತೂಕದ ಚಿನ್ನದ ನಾಣ್ಯವನ್ನು ನೀಡುತ್ತಿದ್ದಾರೆ.
ಹೆಣ್ಣುಮಕ್ಕಳು ಜನಿಸಿದರೆ ಶಾಪ ಹಾಕುವುದನ್ನು ನಾನು ನೋಡಿದ್ದೇನೆ. ಆದರೆ ನಿಜವಾಗಿಯೂ ಅವರು ಕುಟುಂಬಕ್ಕೆ ಸಂಪತ್ತು ತರುತ್ತಾರೆ. ಅವರು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ ಎಂದು ರಹೀಮ್ ಹೇಳಿದ್ದಾರೆ.
ಈವರೆಗೆ 16 ತಾಯಂದಿರಿಗೆ ಚಿನ್ನದ ನಾಣ್ಯವನ್ನು ರಹೀಮ್ ನೀಡಿದ್ದಾರೆ. ಈಗ ಚಿನ್ನದ ಒಂದು ಗ್ರಾಂ ನಾಣ್ಯದ ಬದಲಿಗೆ ಎರಡು ಗ್ರಾಂ ನಾಣ್ಯವನ್ನು ನೀಡಲು ನಿರ್ಧರಿ ಸಿದ್ದಾರೆ. ಆಸ್ಪತ್ರೆಯಿಂದಲೇ ಹೆಣ್ಣು ಮಗು ವಾಗಿದೆ ಎಂದು ಕುಟುಂಬದವರು ಕರೆ ಮಾಡಿದ ಸನ್ನಿವೇಶವೂ ಇದೆ. ಅಂತಹ ಸಂದರ್ಭದಲ್ಲಿ ತಕ್ಷಣವೇ ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿದ್ದಾರೆ. ನನಗೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ಸಂಬಳ ಬರುತ್ತದೆ. ಒಂದು ಗ್ರಾಂ ನಾಣ್ಯಕ್ಕೆ 2500 ರೂ. ವೆಚ್ಚವಾಗುತ್ತದೆ. ನನ್ನ ಸಂಬಳದ ಸಣ್ಣ ಮೊತ್ತವನ್ನು ಇದಕ್ಕಾಗಿ ನಾನು ನೀಡಬಲ್ಲೆ ಎಂದು ರಹೀಮ್ ಹೇಳಿದ್ದಾರೆ. ದೇಶದ ಇತರ ಭಾಗಗಳಿಗಿಂತ ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ. ಆದರೆ ಜನನ ದರ ಇಳಿಕೆಯಾಗುತ್ತಿದ್ದು, ಲಿಂಗಾನುಪಾತ ಇಳಿಕೆಯಾ ಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಹೀಮ್ ಅವರ ಕ್ರಮ ಅತ್ಯಂತ ಮಹತ್ವದ್ದಾಗಿದೆ.