Advertisement

ಎಲ್ಲಾ ವ್ಯಾಪಾರಿಗಳಿಗೆ ಅಂಗಡಿ ನೀಡಿ

05:37 PM Dec 31, 2021 | Team Udayavani |

ಹುಬ್ಬಳ್ಳಿ: ಜನತಾ ಬಜಾರ್‌ ಮಾರುಕಟ್ಟೆ ನಿರ್ಮಾಣ ಪೂರ್ವ ಅಲ್ಲಿನ ವ್ಯಾಪಾರಿಗಳಿಗೆ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಈ ಯೋಜನೆ ಬೇಕಾಗಿರಲಿಲ್ಲ. ಕೂಡಲೇ ಪರಿಷ್ಕೃತ ಯೋಜನೆ ರೂಪಿಸಿ ಇದರಲ್ಲಿ ಎಲ್ಲಾ ವ್ಯಾಪಾರಿಗಳಿಗೆ ಅಂಗಡಿಗಳನ್ನು ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಸರ್ಕ್ನೂಟ್‌ಹೌಸ್‌ನಲ್ಲಿ ಗುರುವಾರ ಜನತಾ ಬಜಾರ್‌ ವ್ಯಾಪಾರಿಗಳೊಂದಿಗೆ ಸಭೆಯಲ್ಲಿ ನೆಲ ಹಾಗೂ 1 ನೇ ಮಹಡಿಯಲ್ಲಿ ಅಂಗಡಿ ಪಡೆಯುವ ಕುರಿತು ವ್ಯಾಪಾರಿಗಳಲ್ಲಿ ಉಂಟಾಗಿರುವ ಗೊಂದಲ ಕುರಿತು ಪ್ರತಿಕ್ರಿಯಿಸಿ, ಚಿಲ್ಲರೆ ವ್ಯಾಪಾರಿಗಳ ಅಂಗಡಿಗಳನ್ನು ಮೊದಲ ಮಹಡಿಯಲ್ಲಿ ನೀಡಿದರೆ ವ್ಯಾಪಾರ ಆಗೋದಾದರೂ ಹೇಗೆ? ಅಲ್ಲಿಗೆ ಗ್ರಾಹಕರು ಹೋಗಲು ಸಾಧ್ಯವೇ. ಇಂತಹ ಅಂಗಡಿಗಳನ್ನು ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಬೇಕಿತ್ತು. ಕಚೇರಿ, ಸಗಟು ವ್ಯಾಪಾರದಂತಹವುಗಳನ್ನು ಮೇಲ್ಮಹಡಿಯಲ್ಲಿದ್ದರೆ ನಡೆಯುತ್ತದೆ.

ಇದು ಸರಿಯಾದ ಕ್ರಮವಲ್ಲ. ಇದ್ದವರಿಗೆ ಮೊದಲ ಆದ್ಯತೆ ನೀಡಬೇಕು. ಯಾರಿಗೆ ಎಲ್ಲಿ ಅಂಗಡಿ ನೀಡಬೇಕೆನ್ನುವ ಕುರಿತು ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚಿಸಿ
ಒಂದು ವಾರದೊಳಗೆ ಪರಿಷ್ಕೃತ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು. ಬೀದಿ ಬದಿ ವ್ಯಾಪಾರಿಗಳ ಪರ ಮಾತನಾಡಿದ ಪ್ರೇಮನಾಥ ಚಿಕ್ಕತುಂಬಳ, ಕಟ್ಟಡ ಸುತ್ತಲೂ ಸಾಕಷ್ಟು ಜಾಗ ಬಿಡಲಾಗಿದೆ. ಕಳೆದ ನಾಲ್ಕೈದು ದಶಕಗಳಿಂದ ವ್ಯಾಪಾರ ಮಾಡಿಕೊಂಡು ಬಂದ ಸಣ್ಣ ವ್ಯಾಪಾರಿಗಳಿಗೆ ಕಟ್ಟಾ ನಿರ್ಮಿಸಿಕೊಡಬೇಕು. ಈ ವ್ಯಾಪಾರಿಗಳನ್ನು ಕಡೆಗಾಣಿಸುವುದು ಸರಿಯಲ್ಲ ಎಂದರು.

ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಕಟ್ಟಡ ಸುತ್ತಲಿನ ಜಾಗವೂ ಸೆಟ್‌ ಬ್ಯಾಕ್‌ ಆಗಿದ್ದು, ಏನಾದರೂ ಅವಘಡಗಳು ಸಂಭವಿಸಿದರೆ ತುರ್ತು ಕಾರ್ಯಗಳ ಬಳಕೆಗಾಗಿ ಈ ಸ್ಥಳ ಬಿಡಲಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಅಸಾಧ್ಯವಾಗಿದೆ. ಆದ್ಯತೆ ಮೇರೆಗೆ ಕಟ್ಟಡಗಳಲ್ಲಿ ಅಂಗಡಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಮೊದಲ ಮಹಡಿಯಲ್ಲಿ ಅಂಗಡಿಗಳಿಗೆ ಸ್ಥಳಾವಕಾಶ ಚೆನ್ನಾಗಿದೆ. ಆದರೆ ಜನರು ಇಲ್ಲಿಗೆ ಬರುತ್ತಾರೆಯೇ ಎನ್ನುವುದು ದೊಡ್ಡ ಗೊಂದಲವಾಗಿದೆ. ಕೆಲವರು ಇಲ್ಲಿ ಅಂಗಡಿ ಪಡೆಯಲು ಸಿದ್ಧರಿದ್ದಾರೆ.

ಕಿರಾಣಿ ಅಂಗಡಿಗಳಿಗೆ ಹೆಚ್ಚಿನ ಸಾಮಗ್ರಿಗಳು ಬರುವುದರಿಂದ ಮೇಲಕ್ಕೆ ತೆಗೆದುಕೊಂಡು ಹೋಗುವುದು ಕಷ್ಟವಾಗಲಿದೆ. ಹೀಗಾಗಿ ನೆಲ ಮಹಡಿಯಲ್ಲಿ ನೀಡುವಂತೆ ಕೆಲ ವ್ಯಾಪಾರಿಗಳು ಮನವಿ ಮಾಡಿದರು. ಕೆಲ ವ್ಯಾಪಾರಿಗಳು ನೆಲ ಮಹಡಿಗೆ ನೇರವಾಗಿ ರ್‍ಯಾಂಪ್‌ ವ್ಯವಸ್ಥೆ ಮಾಡಿದರೆ ವ್ಯಾಪಾರಿಗಳಿಗೆ, ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅಂಗಡಿ ಆಯ್ಕೆಯಲ್ಲಿರುವ ಗೊಂದಲಕ್ಕೆ ಬಹುತೇಕ ಪರಿಹಾರ ನೀಡಿದಂತಾಗುತ್ತದೆ ಎಂದು ಕೆಲ ವ್ಯಾಪಾರಿಗಳಿಗೆ ಸಲಹೆ ನೀಡಿದರು. ಈ ಕುರಿತು ಗಮನ ಹರಿಸುವಂತೆ ಶೆಟ್ಟರ ಸೂಚಿಸಿದರು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಎಂಡಿ ಶಕೀಲ ಅಹ್ಮದ್‌, ವ್ಯಾಪಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next