ಬೆಂಗಳೂರು: ನಗರದ ರಸ್ತೆ ಗುಂಡಿಗಳ ಸ್ಥಿತಿಗತಿ ಹಾಗೂ ಅವುಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳ ಬಗ್ಗೆ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಮಂಗಳವಾರ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಈ ಕುರಿತು ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಗೆ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ “7 ತಿಂಗಳಿನಿಂದ ಬಿಬಿಎಂಪಿ ರಸ್ತೆ ಗುಂಡಿಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸಿಲ್ಲ,. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಹಾಳಾಗಿದ್ದು, ವಾಹನ ಸವಾರರು ಓಡಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ ಎಂದರು.
ಆಗ ಪಾಲಿಕೆ, ರಸ್ತೆ ಗುಂಡಿಗಳನ್ನು ಮುಚ್ಚಲು ಯಾವ ಪದ್ಧತಿ ಅನುಸರಿಸುತ್ತಿದ್ದೀರಾ? ಎಲ್ಲೆಲ್ಲಿ ಗುಂಡಿಗಳಿವೆ ಎಂದು ಗುರುತಿಸಲಾಗಿದೆ? ಆ ಬಗ್ಗೆ ವಿವರ ನೀಡಿ ಎಂದು ಕೇಳಿತು. ಗುಂಡಿ ರಹಿತ ರಸ್ತೆಗಳನ್ನು ಬಯಸುವುದು ನಾಗರೀಕರ ಹಕ್ಕು.
ಅಂತೆಯೇ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸಿ ತೊಂದರೆ ಸಿಲುಕಿದವರಿಗೆ ಪರಿಹಾರವನ್ನೂ ಸಹ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಮೌಖೀಕವಾಗಿ ಅಭಿಪ್ರಾಯಪಟ್ಟಿತು. ಅಲ್ಲದೇ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ಕೊಡಿ, ಎಂದು ಹೇಳಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.