Advertisement

ಬಾಡಿಗೆಗೆ ಮನೆ ಕೊಟ್ಟು ನೋಡು…

06:00 AM Nov 05, 2018 | |

ಬಾಡಿಗೆಗೆಂದು ಬರುವವರೆಲ್ಲ ಒಳ್ಳೆಯವರೇ ಆಗಿರುತ್ತಾರೆ ಎಂಬು ಗ್ಯಾರಂಟಿ ಕೊಡಲು ಸಾಧ್ಯವೇ ಇಲ್ಲ. ಕೆಲವ ಸಂದರ್ಭದಲ್ಲಿ ಬಾಡಿಗೆದಾರರು ಮನೆ ಖಾಲಿ ಮಾಡದೆ ಮನೆ ಮಾಲೀಕನೆ ನೆಮ್ಮದಿಯನ್ನು ಹಾಳು ಮಾಡಿಬಿಡಬಹುದು. ಹಾಗಾಗಿ, ಕೆಲವರ ಮಾತನ್ನೇ ನಂಬುವುದಾದರೆ- ಈಗ ಮನೆ ಕಟ್ಟಿಸುವುದು ಕಷ್ಟವಲ್ಲ. ಮನೆಯನ್ನು ಬಾಡಿಗೆದಾರರಿಂದ ಉಳಿಸಿಕೊಳ್ಳುವುದೇ ಕಷ್ಟ….

Advertisement

ಮನೆ ಕಟ್ಟಿ ನೋಡು, ಅದನ್ನ  ಬಾಡಿಗೆಗೆ ಬಿಟ್ಟು ನೋಡು!
“ಮನೆ ಕಟ್ಟಿ ನೋಡು’ ಎಂಬ ಮಾತಿನಿಂದ ಆರಂಭವಾಗುವ ಗಾದೆ ಸವಕಲಾಯಿತು. ಈಗ ಮನೆ ಕಟ್ಟಿಸುವುದನ್ನು ಸಂಪೂರ್ಣವಾಗಿ ಗುತ್ತಿಗೆಗೆ ಕೊಡಬಹುದು. ಅದರ ಮೇಲ್ವಿಚಾರಣೆ ನಡೆಸಿ, ಅತ್ಯುತ್ತಮ ಗುಣಮಟ್ಟದ, ನಾವು ಹೇಳಿದಂತೆ ಕಟ್ಟಿಸಿಕೊಡುವ ಏಜೆನ್ಸಿಗಳು ಬಂದು ದಶಕಗಳೇ ಸಂದಿವೆ. ನಮ್ಮ ಕೈಯಲ್ಲಿ ಹಣ ಇರಬೇಕಾದುದು ಕೂಡ ಅವಶ್ಯಕವಲ್ಲ, ಮನೆ ದಾಖಲೆ ಪಕ್ಕಾ ಇದ್ದರಾಯಿತು. ನಮಗೆ ಸಂಬಳ ಕೊಡುವ ಸಂಸ್ಥೆ ಗಟ್ಟಿ ಇದೆಯೆಂದರೆ, ಬ್ಯಾಂಕ್‌ಗಳು ಮನೆ ಕಟ್ಟಲು ಸಾಲ ಕೊಡಲು ಅದೇ ನಿವೇಶನದ ಸುತ್ತಮುತ್ತ ಸುತ್ತುತ್ತಾರೆ! ಸಲೀಸಾಗಿ ಹರಿದುಬರುತ್ತಿರುವ ಹಣದಿಂದ ಮನೆ ಕಟ್ಟುವವರ, ಫ್ಲಾಟ್‌ ಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಇದೇ ವೇಳೆ ಉದ್ಯೋಗ ನಿಮಿತ್ತ ತಾವು ಕಟ್ಟಿಸಿಕೊಂಡ ಮನೆಯಲ್ಲಿ ವಾಸವಾಗಿರಲಾರದೆ ಅದನ್ನು ಬಾಡಿಗೆಗೆ ಕೊಡಬೇಕಾದ ಸನ್ನಿವೇಶ ಹಲವರಿಗಿದೆ. ಈಗ ಗಾದೆ ಮಾತು ಬದಲಿಸಬೇಕಾದ ಸಂದರ್ಭ, ಮನೆ ಬಾಡಿಗೆಗೆ ಕೊಟ್ಟು ನೋಡು…..!

ಮನೆ ಸ್ವಂತ, ಸಮಸ್ಯೆಗೂ ಸ್ವಾಗತ!
ಮನೆಯನ್ನು ಬಾಡಿಗೆಗೆ ಕೊಡುವಾಗ ಮುಂಗಡ ಹಾಗೂ ಮಾಸಿಕ ಬಾಡಿಗೆಯನ್ನು ಪಡೆಯುವಾಗಿನ ಸಂತೊಷ ಕೆಲವೇ ಸಮಯದಲ್ಲಿ ಮಾಯವಾಗುತ್ತದೆ. ಬಾಡಿಗೆ ನೀಡಿದ ಮನೆಯ ಸಂಪ್‌ನ ಪಂಪ್‌ಸೆಟ್‌ ಕೈಕೊಟ್ಟಿರುತ್ತದೆ. ಡ್ರೆ„ನೇಜ್‌ನ ಸಂಪರ್ಕ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿರುತ್ತದೆ. ಇಂತಹ ವೇಳೆ, ಮಧ್ಯರಾತ್ರಿ ಕೂಡ ಬಾಡಿಗೆ ನೀಡಿದವನಿಗೆ ಕರೆ ಮಾಡಿ ಬಾಡಿಗೆದಾರ ಕಿರಿಕಿರಿ ಮಾಡಬಹುದು. ಕಾನೂನು ಹಾಗೂ ನೈತಿಕವಾಗಿಯೂ ಅವುಗಳನ್ನು ಸುವ್ಯವಸ್ಥಿತವಾಗಿ ಒದಗಿಸುವುದು ಮನೆ ಮಾಲೀಕನ ಕರ್ತವ್ಯ. ಇಂಥ ಸಮಯದಲ್ಲಿ ಮನೆಯನ್ನು ಬಾಡಿಗೆಗೆ ಕೊಟ್ಟವ ಇರುವ ಎಲ್ಲ ಕೆಲಸ ಬಿಟ್ಟು, ಬಾಡಿಗೆ ಮನೆಯ ಸಮಸ್ಯೆ ಬಗೆಹರಿಸಲು ಮುಂದಾಗಬೇಕಾಗುತ್ತದೆ.

ವಾರ್ಷಿಕವಾಗಿ ಮನೆ ಬಾಡಿಗೆ ಶೇ. 10ರಷ್ಟು ಏರುತ್ತದೆ. ಬಾಡಿಗೆಯನ್ನು ಪ್ರತಿ ತಿಂಗಳು ಮನೆಯ ಮಾಲೀಕನ ಬ್ಯಾಂಕ್‌ ಖಾತೆಗೆ ತಿಂಗಳ ಮೊದಲ ಐದು ದಿನಗಳಲ್ಲಿ ಪಾವತಿಸಬೇಕಾಗುತ್ತದೆ. ಇಷ್ಟರ ಮೇಲೆ ಬಾಡಿಗೆದಾತ ಮನೆಯನ್ನು ತನ್ನ ಮನೆಗಿಂತ ಚೆನ್ನಾಗಿ ನಿರ್ವಹಿಸುತ್ತಾನೆ ಎಂಬ ಸ್ವರ್ಗಸದೃಶ ಉದಾಹರಣೆಗಳಿದ್ದರೆ ಸಮಾಧಾನ. ಆದರೆ ಇಲ್ಲೊಂದು ಉದಾಹರಣೆ ಇದೆ.  ಬಾಡಿಗೆಗೆ ಬಂದಾತ ಮೊದಲ ವರ್ಷ ಸರಿಯಾಗಿ ಬಾಡಿಗೆ ಕೊಟ್ಟ. ಮರು ವರ್ಷದ ಬಾಡಿಗೆಯ ಶೇಕಡಾವಾರು ಹೆಚ್ಚಿಗೆಗೂ ಅವನ ತಕರಾರಿಲ್ಲ. ಆದರೆ ಒಂದೂವರೆ ವರ್ಷದ ನಂತರ, ಆತ ಸಮಯಕ್ಕೆ ಸರಿಯಾಗಿ ಬ್ಯಾಂಕ್‌ ಖಾತೆಗೆ ಬಾಡಿಗೆಯನ್ನು ತುಂಬುತ್ತಲೇ ಇಲ್ಲ. ಅಂತೂ ಇದು ಅರಿವಾಗಿ, ಅವನಿಗೆ ನೆನಪಿನ ಕರೆಗಳ ಸರ್ಕಸ್‌ನ್ನೆಲ್ಲ ಮುಗಿಸಿ ಅವನನ್ನು ಹೊರಹಾಕುವಷ್ಟರಲ್ಲಿ ಆರೇಳು ತಿಂಗಳು ಕಳೆದಿತ್ತು. ಆತ ಖಾಲಿ ಮಾಡಿದ ಮನೆ ನೋಡಿದರೆ ಹೃದಯಾಘಾತ ಆಗುವ ಪರಿಸ್ಥಿತಿ. ಠೇವಣಿಯಲ್ಲಿ ಉಳಿದಿರುವ ಮೊತ್ತ ಬಳಸಿದರೂ, ಮನೆಯನ್ನು ಸುಣ್ಣ ಬಣ್ಣ ಸಮೇತ ಮೊದಲಿನ ಸ್ಥಿತಿಗೆ ತರಲಾಗಲಿಲ್ಲ. ಕೊನೆಗೆ, ಮನೆ ಮಾಲೀಕನ ಜೇಬಿಗೇ ಕತ್ತರಿ ಬಿತ್ತು!
ಕತೆ ಇಲ್ಲಿಗೇ ಮುಗಿಯಲಿಲ್ಲ. ದೂರದ ದಾವಣಗೆರೆಯಲ್ಲಿರುವ ಮನೆಯ ಮಾಲೀಕ, ಹೊಸ ಬಾಡಿಗೆದಾರರನ್ನು ಹುಡುಕುತ್ತಿದ್ದರೂ, ಬಾಡಿಕೆದಾರರನ್ನು ಹುಡುಕಿಕೊಡುವ ಏಜೆನ್ಸಿ ಬಳಸಿದರೂ ಹೊಸ ಬಾಡಿಗೆದಾರರು ಸಿಗುತ್ತಿಲ್ಲ. ತುಸು ಗಂಭೀರವಾಗಿ ಹುಡುಕಿದಾಗ ತಿಳಿದಿದ್ದು, ಈ ಮನೆ ಬಿಟ್ಟ ಬಾಡಿಗೆದಾರ, ಹತ್ತು ಹಲವರಲ್ಲಿ ಮಾಲೀಕರ ಕುರಿತು ಬಾಯಿಗೆ ಬಂದಂತೆ ಮಾತನಾಡಿ, ಅವರು ಬಾಡಿಗೆಗೆ ಬರದಂತೆ ಮಾಡಿದ್ದ. ಹಾಗೂ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಮನೆ ಮಾಲೀಕ ಸುಸ್ತು. ಆಗ ಅವನಿಗೆ ಗಾದೆ ಬದಲಿಸುವುದು ಹೆಚ್ಚು ಸೂಕ್ತ ಎನ್ನಿಸಿದ್ದು!

ಅನುಕೂಲ, ಅಲ್ಪ ಪ್ರಮಾಣ!
ಈ ಸಮಸ್ಯೆಗೂ ಈಗ ಒಂದು ಉತ್ತರ ಸಿಕ್ಕಿದೆ. ಬಾಡಿಗೆದಾರರನ್ನು ಹುಡುಕಿಕೊಡುವ ಕುಷನ್‌ ಏಜೆಂಟರಿಗಿಂತ ಮುಂದಿನ ಸೇವೆ ಸಲ್ಲಿಸುವ ಈ ವ್ಯವಸ್ಥೆ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಈ ರೀತಿಯ ಏಜೆನ್ಸಿಗಳು ಮನೆ ಮಾಲೀಕರ ಜೊತೆ ತಾವೇ ಒಪ್ಪಂದಕ್ಕೆ ಬರುತ್ತವೆ. ಅವರೇ ಮನೆಯ ಸಂಬಂಧದಲ್ಲಿ ಒಂದು ಪ್ರಮಾಣದ ಮುಂಗಡ ಠೇವಣಿಯನ್ನು ಪಾವತಿಸಿಬಿಡುತ್ತಾರೆ. ಅವರದ್ದು ನಿರ್ದಿಷ್ಟ ವರ್ಷಗಳಿಗೆ ಸೇವೆ ಎಂಬ ಕಾಲಮಿತಿ ನಿಗದಿಯಾಗುತ್ತದೆ. 

Advertisement

ಈ ಸೇವೆಯ ಮಾದರಿ ಕೂಡ ವಿದೇಶದಿಂದ ಆಮದಾದದ್ದು. ಬೇರೆ ದೇಶಗಳಲ್ಲಿ ಒಂದು ಕಾನೂನಿನ ಅಡಿಗೆ ಬಾಡಿಗೆ ವ್ಯವಸ್ಥೆ ಬಂದರೆ ಭಾರತದಲ್ಲಿ ಇದು ಹೆಚ್ಚು ಸಂಕೀರ್ಣ. ಇಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬಾಡಿಗೆ ಕಾನೂನಿನಲ್ಲಿ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಬಾಡಿಗೆ ಕಾಯ್ದೆ 1999 ಜಾರಿಯಲ್ಲಿದ್ದರೆ ದೆಹಲಿಯಲ್ಲಿ ಬಾಡಿಗೆ ಕಾಯ್ದೆ 1995ನ ಅಂಶಗಳು ಲಾಗೂ ಆಗುತ್ತವೆ. ನಮ್ಮ  ರಾಜ್ಯದ ಕಾನೂನು ಮಾತ್ರ ಈ ವ್ಯವಸ್ಥೆಗೆ ಅನ್ವಯವಾಗುವುದರಿಂದ ಅಖೀಲ ಭಾರತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಬಾಡಿಗೆದಾರರ ಸೇವಾ ಕಂಪನಿಗಳ ನಿಯಮಗಳತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ.

ಈ ಥರದ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಹೆಚ್ಚು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಮನೆ ಮಾಲೀಕ “ಎ’ ಎನ್ನಿಸಿಕೊಂಡರೆ ಸೇವಾ ಕಂಪನಿ “ಬಿ’. ಬಿ ಇಂದ ನಿಗದಿಯಾಗುವ ಬಾಡಿಗೆದಾರ ಸಿ. ಇಲ್ಲಿ ಎ ಮತ್ತು ಬಿ ನಡುವೆ ಕಾನೂನಿನ ಒಪ್ಪಂದ ಇರುತ್ತದೆಯೇ ವಿನಃ ಎ ಹಾಗೂ ಸಿ ನಡುವೆ ಯಾವುದೇ ಸಂಬಂಧ ಇರುವುದಿಲ್ಲ. ವಿಚಿತ್ರ ಎಂದರೆ ಅಪರಾಧಗಳು, ಅಪಸವ್ಯಗಳು ನಡೆದರೆ ಯಾವುದೇ ಕಾನೂನಿನ ಹೋರಾಟ ನಡೆಸಬೇಕಾದವರು ಎ ಮತ್ತು ಸಿ ಆಗುತ್ತಾರೆ. ಈಗ ಎ ಮತ್ತು ಸಿ ನಡುವೆ ಬಾಡಿಗೆ ಒಪ್ಪಂದವನ್ನು ಮಾಡಿಸುವ ಮಾದರಿ ಕೆಲವೆಡೆ ಬಂದಿದೆಯಾದರೂ ದೇಶ ಅಥವಾ ಸಂಪರ್ಕಿಸಲಾಗದ ಸಂಕಷ್ಟದಲ್ಲಿರುವಾಗ ಎ ಮತ್ತು ಬಿ ನಡುನ ಒಪ್ಪಂದವೇ ಲಾಗೂ ಆಗುತ್ತದೆ. ಈ ನಿಟ್ಟಿನಲ್ಲಿ ಮನೆ ಮಾಲೀಕನ ಯಾವುದೇ ಮುತುವರ್ಜಿ ಅವನನ್ನು ರಕ್ಷಿಸುವುದಿಲ್ಲ ಎಂಬುದು ಸ್ಪಷ್ಟ.

ವಂಚನೆಗೂ ಜಾಗವಿದೆ!
ಟಿಪಿಕಲ್‌ ವಂಚನೆಯ ಹಲವು ವಿಧಗಳನ್ನು ಈ ಮಧ್ಯದಲ್ಲಿ ಗುರುತಿಸಬಹುದು. ಒಂದು ಮನೆಯನ್ನು ಬಾಡಿಗೆದಾರರ ಸೇವೆ ಕೊಡುವವನು ಒಬ್ಬರಿಗಿಂತ ಹೆಚ್ಚು ಜನರಿಗೆ ಹಂಚಿ ಅಥವಾ ಪಿ.ಜಿ ಸ್ವರೂಪದಲ್ಲಿ ನಿರ್ವಹಿಸಬಹುದು. ಒಂದು ಪ್ರದೇಶದ ಅಥವಾ ಒಂದು ವಸತಿ ಸಮುಚ್ಚಯವನ್ನು ಒಂದು ಕಂಪನಿಯ ಹಿಡಿತಕ್ಕೆ ಕೊಡುವುದರಿಂದ ಆತನ ಏಕಸ್ವಾಮ್ಯ ನಿರ್ಮಾಣವಾಗಿ ಆತ ಬಾಡಿಗೆದಾರನಿಗೆ ಹೆಚ್ಚು ಬಾಡಿಗೆ ವಸೂಲಿಗಿಳಿಯಬಹುದು ಹಾಗೂ ಮನೆಯ ಅಸಲಿ ಮಾಲೀಕನಿಗೆ ಕಡಿಮೆ ಬಾಡಿಗೆ ತರಿಸಬಹುದು. ಖಾಲಿಯಾದ ಮನೆಗೆ ಬಾಡಿಗೆದಾರರನ್ನು ತಂದು ಕೂರಿಸುವ ಜವಾಬ್ದಾರಿ ಸೇವಾ ಕಂಪನಿಯಗಿದ್ದು ಆತ ಹೇಳಿದವರೇ ಬಾಡಿಗೆದಾರರಾಗುತ್ತಾರೆ. ಆತ ಬೇಕೆಂದೇ ನಾಲ್ಕು ತಿಂಗಳು ಖಾಲಿ ಬಿಟ್ಟರೆ ಮಾಲೀಕ ಬಾಯಿ ಬಾಯಿ ಬಿಡಬೇಕಾಗುತ್ತದೆ. ಮಧ್ಯದಲ್ಲಿ ನನ್ನ ಆಪ್ತರು ಬಾಡಿಗೆಗೆ ಬರುತ್ತಾರೆ ಎಂದು ಮಾಲೀಕ ಪ್ರತಿಪಾದಿಸಿದರೂ ಆತ ಸಿ ಮೂಲಕವೇ ಬರಬೇಕು. ಹಾಗೂ ಒಪ್ಪಂದದಲ್ಲಿ ಸೂಚಿತ ಕುಷನ್‌ ಕೊಡಬೇಕು. ಇಂಥ ಒಪ್ಪಂದಗಳ ಮೂಲಕ ಬಾಡಿಗೆದಾರರನ ಬದಲು ಈ ಕಂಪನಿ ಮನೆ ಮಾಲೀಕನನ್ನು ಕಾಡಬಹುದು. ಆಗ ಹಳೆ ಗಾದೆ ಮಾತು ಅನ್ವಯಿಸುತ್ತದೆ, ಬಾಣಲೆಯಿಂದ ಬೆಂಕಿಗೆ!

ಮನೆಯ ನಿರ್ವಹಣೆ, ದಾಖಲೆ, ಕಂದಾಯಗಳ ಹೊಣೆ ಹೊತ್ತ ಸಮರ್ಪಕವಾಗಿ ಕೆಲಸ ಮಾಡುವ ಸೇವಾ ಕಂಪನಿಗಳಿಲ್ಲ ಎಂತಿಲ್ಲ. ಅಂಥ ಕಂಪನಿಗಳಿಗೆ ಮನೆಯನ್ನು ಒಪ್ಪಿಸಿ ನಿರುಮ್ಮಳವಾಗಿ ಇರುವವರೂ ಇದ್ದಾರೆ. ಇಂತಹ ಸೇವೆಗೆ ರಾಷ್ಟ್ರ ಮಟ್ಟದ ಕಂಪನಿಗಳೂ ಇವೆ. ಇಲ್ಲಿ ಮನೆ ಮಾಲೀಕ ಸೇವಾ ಕಂಪನಿಯ ಆಯ್ಕೆಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸೇವಾ ಒಪ್ಪಂದಗಳಲ್ಲಿ ಬಾಡಿಗೆದಾರ ಪಾವತಿಸಿದ ಬಾಡಿಗೆ ಮೊತ್ತ ಸೇವಾ ಕಂಪನಿಯ ಮೂಲಕ ಸಲ್ಲಿಕೆಯಾಗುವುದು ಕಡ್ಡಾಯವಾಗಿರುತ್ತದೆಯೇ ವಿನಃ ಬಾಡಿಗೆದಾರ ಬಾಡಿಗೆ ಪಾವತಿಯಲ್ಲಿ ಮಾಡುವ ವ್ಯತ್ಯಯಕ್ಕೆ ಸೇವಾ ಕಂಪನಿ ಜವಾಬ್ದಾರವಾಗುವುದಿಲ್ಲ. ತಾನು ಕೈಯಿಂದ ಈ ಮೊತ್ತ ತುಂಬುವುದಿಲ್ಲ. ಈ ರೀತಿಯ ಅಂಶಗಳಲ್ಲಿ ಹೆಚ್ಚು ಜವಾಬ್ದಾರಿಯನ್ನು ಹೊರುವ ಕಂಪನಿಗಳನ್ನು ಮಾಲೀಕ ಆರಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಬಾಡಿಗೆ ಮೊತ್ತದ ಶೇ. 10ರಿಂದ 20 ಭಾಗವನ್ನು ಸೇವಾ ಶುಲ್ಕವಾಗಿ ಇವು ಪಡೆಯುತ್ತವೆ. ಬಾಡಿಗೆದಾರ ಮಾಸಿಕ 20 ಸಾವಿರ ರೂ. ಬಾಡಿಗೆ ಪಾವತಿಸಿದರೂ ನಿಮಗೆ ನಾಲ್ಕು ಸಾವಿರ ಕಡಿತವಾಗಿ 16 ಸಾವಿರವಷ್ಟೇ ಸಿಗುತ್ತದೆ.

ಖಾಸಗಿ ಸೇವಾ ವ್ಯವಹಾರದಾರರನ್ನು ಬಿಟ್ಟರೂ ಬೆಂಗಳೂರಿನಲ್ಲಿಯೇ ಇಂತಹ ಹತ್ತುಹಲವು ವ್ಯವಸ್ಥಿತ ಕಂಪನಿಗಳಿವೆ. ಜೆನಿಫಿ, ನೆಸ್ಟ್‌ ಅವೇ, ಲೋಕಲೋ, ಗ್ರಾಬ್‌ಹೌಸ್‌, ರೆಂಟ್‌ ಈಸಿ, ರಿಯಾಲಿಟಿ ಕಾರ್ಟ್‌…ಹೀಗೆ ಬೆರಳೆಣಿಕೆ ದಾಟುವಷ್ಟು ಕಂಪನಿಗಳನ್ನು ನೋಡಬಹುದು. ಈ ರೀತಿಯ ಕಂಪನಿಗಳ ಜೊತೆಗೆ ಒಪ್ಪಂದಕ್ಕೆ ಬರುವ ಮುನ್ನ ನುರಿತ ವಕೀಲರ ಸಲಹೆ ಅನಿವಾರ್ಯ, ನಿರ್ಲಕ್ಷ್ಯ ಬೇಡ.

– ಮಾ.ವೆಂ.ಸ.ಪ್ರಸಾದ್‌,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next